ಸಾಹಿತ್ಯ
ಅಕ್ಷರಗಣ, ಮಾತ್ರಾಗಣ ಮತ್ತು ಅಂಶಗಣ

ಪ್ರಾಚೀನ ಮತ್ತು ಮಧ್ಯಕಾಲೀನ ಕನ್ನಡಕಾವ್ಯವನ್ನು, ಬಹುಮಟ್ಟಿಗೆ ಖಚಿತವಾದ ಮೂರು ಛಂಧೋಮಾದರಿಗಳಲ್ಲಿ ರಚಿಸಲಾಗುತ್ತಿತ್ತು. ಅವುಗಳನ್ನು ಅಕ್ಷರ ಛಂದಸ್ಸು, ಮಾತ್ರಾ ಛಂದಸ್ಸು ಮತ್ತು ಅಂಶ ಛಂದಸ್ಸು ಎಂದು ಕರೆಯಲಾಗಿದೆ. ಅವು ಕಾವ್ಯದಲ್ಲಿ ಬರುವ ಧ್ವನಿಘಟಕಗಳ ಪ್ರಮಾಣವನ್ನು ಅಳೆಯುವ ಮೂರು ವಿಭಿನ್ನ ತತ್ವಗಳನ್ನು ಅವಲಂಬಿಸಿವೆ. ಆದರೂ ಅವೆಲ್ಲವೂ ಒಂದು ಧ್ವನಿಘಟಕವನ್ನು ಉಚ್ಚರಿಸಲು ಅಗತ್ಯವಾದ ಕಾಲಮಾನವನ್ನು ಪರಿಗಣನೆಗೆ ತೆಗದುಕೊಳ್ಳುತ್ತವೆ. ಪದದ ಯಾವುದೋ ಒಂದು ಭಾಗದ ಮೇಲೆ ಬೀಳುವ ಸ್ವರಾಘಾತದ(ಸ್ಟ್ರೆಸ್) ಸ್ವರೂಪವು ಕನ್ನಡ ಛಂದಸ್ಸಿನಲ್ಲಿ ಮುಖ್ಯವಾಗುವುದಿಲ್ಲ. ಇದು ಇಂಗ್ಲಿಷ್ ಛಂದಸ್ಸಿನ ವಿಧಾನಕ್ಕಿಂತ ಭಿನ್ನವಾಗಿದೆ. ಈ ಮೂರು ಛಂಧೋವ್ಯಸ್ಥೆಗಳಲ್ಲಿ, ಒಂದು ಹ್ರಸ್ವ ಸ್ವರವನ್ನು ಉಚ್ಚರಿಸಲು ಬೇಕಾಗುವ ಕಾಲವೇ ಅಳತೆಯ ಮೂಲಮಾನ. ಈ ಘಟಕವನ್ನು ಒಂದು ಮಾತ್ರೆ ಎಂದು ಕರೆಯುತ್ತೇವೆ. ಸ್ವರದ ಹಿಂದೆ ಅಥವಾ ಅದರ ನಂತರ, ಕಾಲದಲ್ಲಿ ನಿಲುಗಡೆಯಿಲ್ಲದೆ ಒಂದು ವ್ಯಂಜನವನ್ನು ಸೇರಿಸಿದರೆ, ಅಗತ್ಯವಿರುವ ಕಾಲಮಾನದಲ್ಲಿ ಯಾವ ವ್ಯತ್ಯಾಸವೂ ಉಂಟಾಗುವುದಿಲ್ಲ. ಆದ್ದರಿಂದಲೇ ಮತ್ತು ಎರಡಕ್ಕೂ ಬೆಲೆ ಒಂದು ಮಾತ್ರೆಯೇ. ಈ ರೀತಿಯ ಸ್ವರ-ವ್ಯಂಜನ ಸಂಯೋಜನೆಗಳನ್ನು ಹ್ರಸ್ವಾಕ್ಷರಗಳೆಂದು ಕರೆಯುತ್ತಾರೆ. ಒಂದು ದೀರ್ಘ ಸ್ವರವನ್ನು, ಸ್ವತಂತ್ರವಾಗಿ ಅಥವಾ ಬೇರೊಂದು ವ್ಯಂಜನದ ಸಂಗಡ ಉಚ್ಚರಿಸಲು ಎರಡು ಮಾತ್ರೆಗಳಷ್ಟು ಕಾಲ ಬೇಕಾಗುತ್ತದೆ. ಎಂದರೆ ಹ್ರಸ್ವಾಕ್ಷರವನ್ನು ಹೇಳಲು ತೆಗೆದುಕೊಳ್ಳುವ ಕಾಲದ ಎರಡರಷ್ಟು. ಆದ್ದರಿಂದ, ದೀರ್ಘ ಸ್ವರಗಳು ಮತ್ತು ಅವುಗಳು ವ್ಯಂಜನದೊಂದಿಗೆ ಉಂಟಾಗುವ ಜೋಡಣೆಗಳನ್ನು ದೀರ್ಘಾಕ್ಷರಗಳೆಂದು ಕರೆಯಲಾಗಿದೆ. ಒಂದು ಮಾತ್ರಯಷ್ಟು ಬೆಯುಳ್ಳ ಅಕ್ಷರಗಳನ್ನು ಲಘು ಎಂದೂ ಎರಡು ಮಾತ್ರಗಳಷ್ಟು ಕಾಲ ಬಯಸುವ ಉಚ್ಚಾರಾಂಶಗಳನ್ನು ಗುರು ಎಂದೂ ಕರೆಯಲಾಗಿದೆ. ಸಂಯುಕ್ತಾಕ್ಷರದ(ಒತ್ತಕ್ಷರ) ಹಿಂದಿನ ಅಕ್ಷರಕ್ಕೂ ಎರಡು ಮಾತ್ರಗಳ ಬೆಲೆ ಬಂದು ಅದು ಗುರುವಾಗುತ್ತದೆ. ಒಂದು ಅಕ್ಷರವು ಲಘುವೋ ಅಥವಾ ಗುರುವೋ ಎಂದು ನಿರ್ಧರಿಸಲು ಬೇರೆ ಕೆಲವು ನಿಯಮಗಳೂ ಇವೆ. ಬಹಳ ಅಪರೂಪವಾಗಿ, ತನ್ನ ಉಚ್ಚಾರಣೆಗೆ ಮೂರು ಮಾತ್ರೆಗಳಷ್ಟು ಕಾಲವನ್ನು ಬಯಸುವ ಅಕ್ಷರ ಬರುತ್ತದೆ. ಅದನ್ನು ಪ್ಲುತ ಎಂದು ಕರೆಯಲಾಗಿದೆ. ಯಾವುದೇ ಅಕ್ಷರಗಳ ಅಥವಾ ಉಚ್ಚಾರಾಂಶಗಳ ಸಂಯೋಜನೆಯಲ್ಲಿ ಲಘು ಮತ್ತು ಗುರುಗಳ, ಬೇರೆ ಬೇರೆ ಬಗೆಯ ಜೋಡಣೆಗಳಿರುತ್ತವೆ. ಒಟ್ಟು ಮಾತ್ರೆಗಳ ಸಂಖ್ಯೆಯನ್ನು ಗಮನಕ್ಕೆ ತಂದುಕೊಳ್ಳದ, ಅಕ್ಷರಗಳ ಗುಂಪನ್ನು ಅಕ್ಷರಗಳ ಗುಂಪನ್ನು ಅಕ್ಷರಗಣ ಎಂದು ಕರೆಯುತ್ತೇವೆ. ಉದಾಹರಣೆಗೆ, ಮೂರು ಅಕ್ಷರಗಳ ಗುಂಪು ಅಕ್ಷರಗಣದ ಒಂದು ಮಾದರಿ. ಇದರಲ್ಲಿ ಮೂರು ಮಾತ್ರೆಗಳಿಂದ ಹಿಡಿದು ಆರು ಮಾತ್ರೆಗಳವರೆಗೆ ಎಷ್ಟು ಬೇಕಾದರೂ ಇರಬಹುದು. ಅಕ್ಷರಗಳ ಸಂಖ್ಯೆ ಎಷ್ಟೇ ಇರಲಿ, ನಿರ್ದಿಷ್ಟ ಸಂಖ್ಯೆಯ ಮಾತ್ರೆಗಳನ್ನು ಹೊಂದಿರುವ ಗುಂಪುಗಳನ್ನು ಮಾತ್ರಾಗಣ ಅಥವಾ ಅಂಗಣ ಎಂದು ಕರೆಯುತ್ತೇವೆ. ಮೂರು ಮಾತ್ರೆಯ ಗಣ, ನಾಲ್ಕು ಮಾತ್ರೆಯ ಗಣ ಇತ್ಯಾದಿ.

ಸಂಸ್ಕೃತ ಛಂದಸ್ಸಿನಲ್ಲಿ, ಅಂತೆಯೇ ಆ ಭಾಷೆಯಿಂದ ಕನ್ನಡವು ತೆಗೆದುಕೊಂಡಿರುವ ಛಂದೋಬಂಧಗಳಲ್ಲಿ ಅನೇಕ ಅಕ್ಷರ ಛಂದಸ್ಸಿನ ಪದ್ಯಜಾತಿಗಳಿವೆ. ಇಲ್ಲಿ ಮೂರು ಅಕ್ಷರಗಳ ಒಂದು ಗುಂಪು ಮೂಲಮಾನ. ಸ್ವತಂತ್ರ ಸ್ವರಗಳು, ವ್ಯಂಜನ-ಸ್ವರ ಮತ್ತು ಸ್ವರ-ವ್ಯಂಜನಗಳ ಸಂಯೋಜನೆಯನ್ನು ಮಾತ್ರ ಅಕ್ಷರಗಳೆಂದು ಪರಿಗಣಿಸಲಾಗುತ್ತದೆ. ಈ ಮೂರು ಅಕ್ಷರಗಳು ಲಘು ಅಥವಾ ಗುರು ಆಗಿರಬಹುದು. ಇಂತಹ ಜೋಡಣೆಗಳ ಫಲವಾಗಿ ಎಂಟು ವಿನ್ಯಾಸಗಳು ಹುಟ್ಟಿಕೊಳ್ಳುತ್ತವೆ. ಇವುಗಳನ್ನು ಬೇರೆ, ಬೇರೆ ಹೆಸರುಗಳಿಂದ ಕರೆಯಲಾಗಿದೆ:

೧. ಗುರು.ಗುರು.ಗುರು - ಮ ಗಣ

೨. ಲಘು.ಗುರು.ಗುರು - ಯ ಗಣ

೩. ಗುರು.ಲಘು.ಗುರು - ರ ಗಣ

೪. ಲಘು.ಲಘು.ಗುರು - ಸ ಗಣ

೫. ಗುರು.ಗುರು. ಲಘು- ತ ಗಣ

೬. ಲಘು.ಗುರು.ಲಘು - ಜ ಗಣ

೭. ಗುರು.ಲಘು.ಲಘು - ಭ ಗಣ

೮. ಲಘು.ಲಘು.ಲಘು - ನ ಗಣ

ಪದ್ಯದ ಒಂದು ಸಾಲಿನಲ್ಲಿ ಈ ರೀತಿಯ ಅಕ್ಷರ ಗಣಗಳ ಲೆಕ್ಕವಿಲ್ಲದಷ್ಟು ವಿನ್ಯಾಸಗಳನ್ನು ಹುಟ್ಟಿಸಲು ಸಾಧ್ಯ. ಅವುಗಳನ್ನು ಸಂಸ್ಕೃತ ಛಂದಸ್ಸಿನಲ್ಲಿ ಅಕ್ಷರವೃತ್ತಗಳು ಎಂದು ಕರೆಯುತ್ತಾರೆ.

ಮಾತ್ರಾಗಣ ಛಂದಸ್ಸು ನಾವು ಪರಿಶೀಲಿಸಬೇಕಾಗಿರುವ ಎರಡನೆಯ ಮಾದರಿ. ಇಲ್ಲಿ ಗುಂಪುಗಳನ್ನು ವಿಂಗಡಿಸುವುದು ಅಕ್ಷರಗಳ ಸಂಖ್ಯೆಯ ಆಧಾರದ ಮೇಲೆ ಅಲ್ಲ. ಬದಲಾಗಿ ಇಲ್ಲಿ ಒಂದು ಗುಂಪಿನಲ್ಲಿರುವ ಮಾತ್ರೆಗಳ ಸಂಖ್ಯೆಯು ಮುಖ್ಯ. ಆದ್ದರಿಂದಲೇ ಮಾತ್ರಾಗಣ ಛಂದಸ್ಸು ಎಂಬ ಹೆಸರು ಬಳಕೆಗೆ ಬಂದಿದೆ. ಕನ್ನಡದ ಮಟ್ಟಿಗೆ, ಮೂರು, ನಾಲ್ಕು ಮತ್ತು ಐದು ಮಾತ್ರೆಗಳ ಗುಂಪುಗಳನ್ನು ಮುಖ್ಯ ಘಟಕಗಳಾಗಿ ತೆಗೆದುಕೊಂಡಿದ್ದೇವೆ. ಈ ಬಗೆಯ ಗಣಗಳು ಪದ್ಯದ ಸಾಲಿನಲ್ಲಿ ನಿಯತವಾಗಿ ಪುನರಾವರ್ತನೆಯಾದಾಗ, ನಿರ್ದಿಷ್ಟವಾದ ಲಯವಿನ್ಯಾಸಗಳು ಹುಟ್ಟಿಕೊಳ್ಳುತ್ತವೆ. ಉದಾಹರಣೆಗೆ ಮೂರು ಮಾತ್ರೆಯ ಗಣಗಳನ್ನು ಒಂದೇ ಸಮನೆ ರಚಿಸಿದಾಗ ಉಂಟಾಗುವುದು ಉತ್ಸಾಹ ಲಯ. ಹಾಗೆಯೇ ನಾಲ್ಕು ಮಾತ್ರೆಯ ಗಣಗಳ ಪುನರಾವರ್ತನೆಯು, ಮಂದಾನಿಲ ಲಯಕ್ಕೂ ಹಾಗೂ ಐದು ಮಾತ್ರೆಯ ಗಣಗಳ ಸತತವಾದ ಬಳಕೆಯು ಲಲಿತ ಲಯಕ್ಕೂ ಕಾರಣವಾಗುತ್ತದೆ. ಹಾಗೆಯೇ ಮೂರು ಮತ್ತು ನಾಲ್ಕು ಮಾತ್ರೆಗಳಿರುವ ಎರಡು ಗಣಗಳನ್ನು ಮತ್ತ ಮತ್ತೆ ಬಳಸಿದರೆ ಅದು ಭಾಮಿನೀ ಲಯವಾಗುತ್ತದೆ.

ದ್ರಾವಿಡ ಭಾಷೆಗಳಿಗೆ ಹೆಚ್ಚು ಸಹಜವೂ, ಸಂಕೀರ್ಣವೂ ಆದ ಮೂರನೆಯ ಗುಂಪನ್ನು ಅಂಶ ಛಂದಸ್ಸು ಎಂದು ಕರೆಯಲಾಗಿದೆ. ಇದು ಕೇವಲ ಯಾಂತ್ರಿಕವಾದ ಲೆಕ್ಕಚಾರಗಳಿಗೆ ಅವಕಾಶ ಕೊಡುವುದಿಲ್ಲ. ಈ ಛಂದಸ್ಸು ಅನೇಕ ವೈವಿಧ್ಯಗಳಿಗೆ ಅವಕಾಶ ನೀಡುವುದರಿಂದ, ಹೆಚ್ಚು ಮಧುರವೂ, ಸಂಗೀತಪರವೂ ಆದ ತ್ರಿಪದಿ ಮತ್ತು ಸಾಂಗತ್ಯದಂತಹ ಛಂಧೋರೂಪಗಳಿಗೆ ಅವಕಾಶ ಮಾಡಿಕೊಟ್ಟಿದೆ.

ಛಂದೋಘಟಕಗಳನ್ನು ಮೂರು, ನಾಲ್ಕು ಮತ್ತು ಐದು ಮಾತ್ರೆಗಳಿರುವ ಮೂರು ಬಗೆಗಳಾಗಿ ವಿಂಗಡಿಸುವ ವಿಧಾನವು ಇಲ್ಲಿಯೂ ಅನ್ವಯಿಸುತ್ತದೆ. ಇಲ್ಲಿ ಅವುಗಳನ್ನು ಅನುಕ್ರಮವಾಗಿ ಬ್ರಹ್ಮ ಗಣ. ವಿಷ್ಣು ಗಣ ಮತ್ತು ರುದ್ರ ಗಣ ಎಂದು ಕರೆಯಲಾಗಿದೆ. ಆದರೆ, ಇಲ್ಲಿ ಕವಿ ಅಥವಾ ಗಾಯಕನಿಗೆ, ಪದ್ಯದ ಯಾವುದೇ ಅಕ್ಷರವನ್ನು ಹಿಗ್ಗಿಸಿ ಅಥವಾ ಕುಗ್ಗಿಸಿ ಅವುಗಳ ಮಾತ್ರಾಮೌಲ್ಯವನ್ನು ಹೆಚ್ಚಿಸುವ ಅವಕಾಶವಿದೆ. ಆದ್ದರಿಂದಲೇ ಮೂರು ಅಕ್ಷರಗಳ ಒಂದು ಗಣವು ಬ್ರಹ್ಮ. ವಿಷ್ಣು ಅಥವಾ ರುದ್ರ ಗಣಗಳಲ್ಲಿ ಯಾವುದು ಬೇಕಾದರೂ ಆಗಿರಬಹುದು. ಹೀಗೆ ಮಾಡುವಾಗ ಕವಿಯ ಪ್ರಯೋಗಶೀಲತೆಗೆ ಅಪಾರ ಅವಕಾಶ ಸಿಗುತ್ತದೆ. ಇಲ್ಲಿ ಯಾವುದೂ ಖಚಿತವಾಗಲೀ ಅನುಲ್ಲಂಘನೀಯವಾಗಲೀ ಅಲ್ಲ. ಆದರೆ, ಈ ಛಂದೋರೂಪಗಳು ಯಾಂತ್ರಿಕವೂ ಸರಳವೂ ಆದ ಗಣವಿಭಜನೆಗೆ ಒಡಬಡುವುದಿಲ್ಲ. ತ್ರಿಪದಿ, ಸಾಂಗತ್ಯ, ಮದನವತಿ, ಪಿರಿಯಕ್ಕರ ಮುಂತಾದ ಅನೇಕ ಛಂದೋರೂಪಗಳು ಅಂಶಛಂದಸ್ಸನ್ನು ಅವಲಂಬಿಸಿವೆ. ಹಾಡುವಿಕೆಯನ್ನು ಹೆಚ್ಚಾಗಿ ಇಷ್ಟಪಡುವ ಕನ್ನಡ ಜನಪದ ಕಾವ್ಯವು, ಈ ಛಂದಸ್ಸನ್ನು ಹೆಚ್ಚಾಗಿ ಬಳಸಿಕೊಂಡಿದೆ.

ಈ ಚಿಕ್ಕ ಟಿಪ್ಪಣಿಯಲ್ಲಿ ವಿವರಿಸಲಾಗಿರುವ ಸಂಗತಿಗಳ ಪರಿಚಯವು ಕನ್ನಡ ಕಾವ್ಯದ ಛಂದೋವಿನ್ಯಾಸಗಳ ವಿಶ್ಲೇಷಣೆಗೆ ಉಪಯುಕ್ತವಾಗುತ್ತದೆ.

 

ಮುಂದಿನ ಓದು:

1. ‘ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಛಂದಸ್ಸಿನ ಚರಿತ್ರೆ(ಎರಡು ಸಂಪುಟಗಳು) ಸಂ. ಹಾ.ಮಾ. ನಾಯಕ ಮತ್ತು ಸಿ.ಪಿ. ಕೃಷ್ಣಕುಮಾರ್, ೧೯೮೦, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು. (ಈ ಸಂಪುಟಗಳ ಕೊನೆಯಲ್ಲಿ ನೀಡಿರುವ ಗ್ರಂಥ-ಲೇಖನ ಸೂಚಿಯು ಉಪಯುಕ್ತವಾಗಿದೆ)

2. ‘ಕನ್ನಡ ಛಂದಃಸ್ವರೂಪ, ಟಿ.ವಿ. ವೆಂಕಟಾಚಲಶಾಸ್ತ್ರೀ, ೧೯೭೮, ಮೈಸೂರು

3. ‘ಕನ್ನಡ ಛಂದೋವಿಕಾಸ, ಡಿ.ಎಸ್. ಕರ್ಕಿ, ೧೯೫೬, ಧಾರವಾಡ.

 

 

 

ಮುಖಪುಟ / ಸಾಹಿತ್ಯ