ಭಾಷೆ
ಕನ್ನಡ ಮತ್ತು ಪರ್ಸೋ ಅರಾಬಿಕ್

ಕನ್ನಡ, ಪರ್ಷಿಯನ್ ಅಥವಾ ಅರಾಬಿಕ್ ಭಾಷೆಯನ್ನು ತಮ್ಮ ತಾಯಿನುಡಿಯಾಗಿ ಹೊಂದಿರುವ ಸಮುದಾಯಗಳೊಂದಿಗೆ ಅಥವಾ ಅವರ ದೇಶಗಳೊಂದಿಗೆ ನೇರವಾದ ದೈನಂದಿನ ಸಂಪರ್ಕವನ್ನು ಪಡೆಯಲಿಲ್ಲ. ಆದರೆ, ಆ ಭಾಷೆಯನ್ನು ಬಳಸಬಲ್ಲ ದ್ವಿಭಾಷಿಕರು ಮತ್ತು ಅವುಗಳಲ್ಲಿ ಪರಿಣಿತರಾದ ವಿದ್ವಾಂಸರು ಕನ್ನಡ ಸಮುದಾಯಗಳ ನಡುವೆ ಹಿಂದೆಯೂ ಜೀವಿಸಿದ್ದರು, ಇಂದಿಗೂ ಇದ್ದಾರೆ. ಕನ್ನಡ ಮತ್ತು ಉರ್ದುಗಳ ನಡುವಿನ ಸಂಬಂಧಗಳನ್ನು ಪ್ರತ್ಯೇಕವಾದ ಇನ್ನೊಂದು ನಮೂದಿನಲ್ಲಿ ಚರ್ಚಿಸಿರುವುದರಿಂದ ಈ ಬರೆಹವು ಕನ್ನಡ ಮತ್ತು ಪರ್ಷಿಯನ್/ಅರಾಬಿಕ್ ಭಾಷೆಗಳ ಸಂಬಂಧಕ್ಕೆ ಸೀಮಿತವಾಗಿದೆ.

ಕರ್ನಾಟಕ ಮತ್ತು ಅರಬರ ನಡುವಿನ ಸಂಪರ್ಕವು ರಾಷ್ಟ್ರಕೂಟರ ಆಳ್ವಿಕೆಯ ಕಾಲದಷ್ಟು ಹಿಂದೆ ಹೋಗುತ್ತದೆ. ಆಗಲೇ ಕನ್ನಡವು ಅರಾಬಿಕ್ ಭಾಷೆಯಿಂದ ಕೆಲವು ಪದಗಳನ್ನು ಪಡೆದಿರಬೇಕು. ಈ ಮಾತು ಸೈನ್ಯ, ವಾಣಿಜ್ಯ ಮತ್ತು ವ್ಯಾಪಾರಗಳಿಗೆ ಸಂಬಂಧಿಸಿದ ಪದಗಳಿಗೆ ಹೆಚ್ಚು ನಿರ್ದಿಷ್ಟವಾಗಿ ಅನ್ವಯಿಸುತ್ತದೆ. ಫೌಜು, ತ್ರಾಸು, ತೇಜಿ ಮುಂತಾದ ಪದಗಳು ಹನ್ನೆರಡನೆಯ ಶತಮಾನದ ವೇಳೆಗೆ ಕನ್ನಡಕ್ಕೆ ಬಂದಿದ್ದವು. ಬಹಮನಿಯ ಸುಲ್ತಾನರ ಆಳ್ವಿಕೆ ಮತ್ತು ಹೈದರ್ ಆಲಿ ಹಾಗೂ ಟೀಪು ಸುಲ್ತಾನರ ರಾಜ್ಯಭಾರಗಳು ಈ ಒಳಬರುವಿಕೆಯ ವೇಗವನ್ನು ಇನ್ನಷ್ಟು ಹೆಚ್ಚಿಸಿದವು. ಉರ್ದು ಭಾಷೆಯು ಪರ್ಷಿಯನ್, ಅರಾಬಿಕ್ ಮತ್ತು ಟರ್ಕಿಶ್ ಭಾಷೆಯ ಪದಗಳ ಆಮದಿಗೆ ಮಧ್ಯವರ್ತಿಯಾಗಿ ಕೆಲಸಮಾಡಿತು. ಹಿರಿಯ ವಿದ್ವಾಂಸರಾದ ಭ. ಕೃಷ್ಣಮೂರ್ತಿಯವರು ದಕ್ಷಿಣ ಭಾರತದ ಎಲ್ಲ ಪ್ರಮುಖ ಭಾಷೆಗಳಿಗೂ ಅನ್ವಯವಾಗುವಂತೆ ಒಟ್ಟು ಸನ್ನಿವೇಶವನ್ನು ಹೀಗೆ ಸಂಗ್ರಹಿಸುತ್ತಾರೆ. ಉತ್ತರ ಭಾರತವನ್ನು ಮೊಗಲರು ಆಳುತ್ತಿದ್ದ ಆರು ಶತಮಾನಗಳ ಅವಧಿಯಲ್ಲಿ ಮತ್ತು ಬಹಮನಿಯ ಸುಲ್ತಾನರು ಡೆಕ್ಕನ್ ಪ್ರದೇಶವನ್ನು ಆಳುತ್ತಿದ್ದ ಮೂರು ಶತಮಾನಗಳ ಅವಧಿಯಲ್ಲಿ,(ಹದಿನಾಲ್ಕನೆಯ ಶತಮಾನದಿಂದ ಹದಿನೆಂಟನೆಯ ಶತಮಾನ) ದಕ್ಷಿಣ ಭಾರತದ ಪ್ರಮುಖ ಭಾಷೆಗಳು, ಪರ್ಷಿಯನ್ (ರಾಜ್ಯಭಾಷೆ) ಮತ್ತು ಅರಾಬಿಕ್(ಧರ್ಮದ ಭಾಷೆ) ಮೂಲದ ಅನೇಕ ಪದಗಳನ್ನು ತೆಗೆದುಕೊಂಡವು. ಹದಿನೈದನೆಯ ಶತಮಾನದಿಂದ ಮುಂದೆ ಈ ಪದಗಳು ದಖನೀ ಉರ್ದುವಿನ ಮೂಲಕ, ದಕ್ಷಿಣ ದ್ರಾವಿಡ ಭಾಷೆಗಳೊಳಗೂ ಪ್ರವೇಶ ಪಡೆದವು. ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಬರೆಯುವ/ಬಳಸುವ ಹಳ್ಳಿಯ ಅಧಿಕಾರಿಗಳು, ಭೂಕಂದಾಯ ಮತ್ತು ಕಾನೂನುಗಳಿಗೆ ಸಂಬಂಧಪಟ್ಟ ಅನೇಕ ಆಡಳಿತಾತ್ಮಕ ಪದಗಳನ್ನು ಬಳಸಿಕೊಂಡರು. ಅವು ಈಗ ಜನಸಾಮಾನ್ಯರ ಭಾಷೆಯೊಳಗೆ ಬೆರೆತುಹೋಗಿವೆ. (Dravidian Languages’, by Bhadriraju Krishnamurty, 2003, Camridge University Press)

ಹೀಗೆ ಎರವಲು ತೆಗೆದುಕೊಂಡ ಅನೇಕ ಪದಗಳನ್ನು ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಬದಲಾವಣೆ ಮಾಡಲಿಲ್ಲ. ಅವು ಇಂದಿಗೂ ಮುಂದುವರೆದಿವೆ. ಆದರೆ, ಹೊಸ ಪದಗಳನ್ನು ತೆಗೆದುಕೊಳ್ಲುವ ಪ್ರಕ್ರಿಯೆಯು ನಿಂತುಹೋಗಿದೆ. ಹೀಗೆ ಎರವಲು ತೆಗೆದುಕೊಂಡ ಬಹು ಪಾಲು ಪದಗಳ ಕೊನೆಯಲ್ಲಿ ಸ್ವರವು ಸೇರಿಕೊಂಡಿರುವುದನ್ನು ಗಮನಿಸಬಹುದು.(ಶುಮಾರ್=ಸುಮಾರು, ಜಮೀನ್=ಜಮೀನು, ವಸೂಲ್=ವಸೂಲಿ ಇತ್ಯಾದಿ) ಅದೇ ರೀತಿಯಲ್ಲಿ, ಪದದ ಕೊನೆಯಲ್ಲಿರುವ ಕಾರವು ಕಾರವಾಗಿ, ಬದಲಾಗುತ್ತದೆ. (ಖಜಾನಾ=ಖಜಾನೆ, ತಮಾಷಾ=ತಮಾಷೆ, ರವಾನಾ=ರವಾನೆ)

ಪರ್ಷಿಯನ್ ಮತ್ತು ಅರಾಬಿಕ್ ಭಾಷೆಗಳಿಂದ ಕನ್ನಡಕ್ಕೆ ಬಂದಿರುವ ಕೆಲವು ಪದಗಳ ಪಟ್ಟಿಯನ್ನು ಈ ಕೆಳಗೆ ಕೊಡಲಾಗಿದೆ:

  1. ಪರ್ಶಿಯನ್: ರಾಸ್ತಾ=ರಸ್ತೆ, ಶುಮಾರ್=ಸುಮಾರು, ಶಿಫಾರ್ಸ್=ಶಿಫಾರಸ್ಸು, ದಸ್ತಾವೇಜ್=ದಸ್ತಾವೇಜು, ಸಿಬ್ಬಂದಿ=ಸಿಬ್ಬಂದಿ, ಸೀಪಾಯಿ=ಸಿಪಾಯಿ, ಜಮೀನ್=ಜಮೀನು, ಗುಮಾಸ್ತ=ಗುಮಾಸ್ತ
  2. ಅರಾಬಿಕ್: ಅನಾಮತ್=ಅನಾಮತ್ತು, ಜಫ್ತಿ=ಜಪ್ತಿ, ನಾಜೂಕ್=ನಾಜೂಕು, ಮಾಮೂಲ್=ಮಾಮೂಲಿ, ದಫ್ತರ್=ದಫ್ತರು, ಸಾವ್ಕಾರ್=ಸಾಹುಕಾರ, ಛಾಕೂ=ಚಾಕು.

ಪದಗಳು ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿರುವುದನ್ನು ಇಲ್ಲಿ ಗಮನಿಸಬಹುದು. ಕೇಶಿರಾಜನ ಶಬ್ದಮಣಿದರ್ಪಣ, ಭೀಮಕವಿಯ ಬಸವಪುರಾಣ, ವಿರೂಪಾಕ್ಷಪಂಡಿತನ ಚೆನ್ನಬಸವಪುರಾಣಮತ್ತು ಲಕ್ಷ್ಮೀಶನಜೈಮಿನಿ ಭಾರತದಂತಹ ಪ್ರಾಚೀನ ಸಾಹಿತ್ಯಕೃತಿಗಳಲ್ಲಿ ಅನೇಕ ಪರ್ಷಿಯನ್ ಮತ್ತು ಅರಾಬಿಕ್ ಪದಗಳನ್ನು ಕಾಣಬಹುದು.

ಇದು ಕೇವಲ ಎರಡು ಗುಂಪುಗಳ ಭಾಷೆಗಳ ನಡುವೆ ನಡೆಯುವ ಶಬ್ದಗಳ ವಿನಿಮಯವಲ್ಲ. ಬದಲಾಗಿ ಇದು ಸಾಂಸ್ಕೃತಿಕ ವಿನಿಮಯದ ಉಪಉತ್ಪನ್ನ. ಸಂಸ್ಕೃತಿಗಳ ಈ ಬೆರೆಯುವಿಕೆಯು ಕರ್ನಾಟಕದ ಕಲೆಗಳು ಕುಶಲಕಲೆಗಳಿಗೆ ಸಾಕಷ್ಟು ಶ್ರೀಮಂತಿಕೆಯನ್ನು ಕೊಟ್ಟಿದೆ. ಅದೂ ಅಲ್ಲದೆ, ಪರ್ಸೋ-ಅರಾಬಿಕ್ ಭಾಷೆಗಳು ಮತ್ತು ಸಂಸ್ಕೃತಿಗಳನ್ನು ಸಂಪೂರ್ಣವಾಗಿ ಇಸ್ಲಾಂ ಧರ್ಮದೊಂದಿಗೆ ಒಂದಾಗಿ ನೋಡುವುದು ಸರಿಯಲ್ಲ. ಶಿಶಿರಕುಮಾರ ದಾಸ್ ಅವರು ಹೇಳಿರುವಂತೆ, ಪರ್ಷಿಯನ್ ಮತ್ತು ಅರಾಬಿಕ್ ಭಾಷೆಗಳ ಮೂಲಕ ಇಂಡಿಯಾಕ್ಕೆ ಬಂದ ಕಥೆಗಳು ಮತ್ತು ಕಥಾನಕಗಳು(ಲೆಜೆಂಡ್ಸ್ ಅಂಡ್ ಟೇಲ್ಸ್) ಮತೀಯವಾದ ಧೋರಣೆಗಳ ಪ್ರತಿಫಲನಗಳಾಗಿರುವುದು ಅನಿವಾರ್ಯವಾಗಿರಲಿಲ್ಲ. ಅವುಗಳಲ್ಲಿ ಎಷ್ಟೋ ಕಥೆಗಳು ಇಸ್ಲಾಂ ಧರ್ಮಕ್ಕಿಂತ ಹಿಂದಿನ ಕಾಲಕ್ಕೆ ಸೇರಿದವು. ...... ರೂಮಿ, ಸಾದಿ, ಓಮರ್ ಖಯಾಮ್, ಹಫೀಜ್ ಮುಂತಾದವರ ಸುಂದರ ಕವಿತೆಗಳು ಧಾರ್ಮಿಕವಾದ ಯಾವುದೇ ಹಣೆಪಟ್ಟಿಯನ್ನು ನಿರಾಕರಿಸುತ್ತವೆ....... ಇಂಡಿಯಾದಲ್ಲಿ ಕೂಡ, ಪರ್ಸೋ-ಅರಾಬಿಕ್ ಸಂಗತಿಗಳನ್ನು ಮುಸ್ಲಿಮರ ಸ್ವಂತ ಆಸ್ತಿಯೆಂದು ಪರಿಗಣಿಸುತ್ತಿರಲಿಲ್ಲವೆಂಬ ಸಂಗತಿಯನ್ನೂ ಇಲ್ಲಿಯೇ ಒತ್ತುಕೊಟ್ಟು ಹೇಳಬೇಕು. ಅನೇಕ ಮುಸ್ಲಿಮೇತರರು ಕೂಡ ಅವುಗಳನ್ನು ಸಂವೇದನಶೀಲವಾಗಿ ಮತ್ತು ಪರಿಣಾಮಕಾರಿಯಾಗಿ ಬಳಸಿದರು. ಅವು ಉರ್ದು ಅಲ್ಲದೆ ಇತರ ಭಾರತೀಯ ಭಾಷೆಗಳ ಮೇಲೆಯೂ ಗಾಢವಾದ ಪರಿಣಾಮವನ್ನು ಬೀರಿವೆ.” (History of Indian Literature, by Sisir Kumar Das, Sahitya Academy, New Delhi)

ಶಿಶಿರಕುಮಾರ ದಾಸ್ ಅವರ ಮಾತುಗಳಿಗೆ ಪುರಾವೆಯಾಗಿ, ಉಮರ್ ಖಯಾಂನ ರುಬಾಯಿಯತ್ ಕಾವ್ಯವನ್ನು ಕನ್ನಡದ ಮೂವರು ಮುಖ್ಯ ಕವಿಗಳು ಅನುವಾದಿಸಿರುವರೆಂಬ ಸಂಗತಿಯನ್ನು ಹೇಳಬಹುದು. ಶೇಕ್ ಸಾದಿ, ರೂಮಿ ಮುಂತಾದ ಕವಿಗಳೂ ಕನ್ನಡಕ್ಕೆ ಬಂದಿದ್ದಾರೆ.

 

ಮುಂದಿನ ಓದು:

    1. ಕನ್ನಡದಲ್ಲಿ ಪಾರ್ಸಿ, ಉರ್ದು ಶಬ್ದಗಳು’, ಡಿ.ಕೆ. ಭೀಮಸೇನರಾವ್, ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ, ಸಂಪುಟ 22.

ಮುಖಪುಟ / ಭಾಷೆ