ನಾಡು, ಇತಿಹಾಸ ಮತ್ತು ಪ್ರಮುಖ ವ್ಯಕ್ತಿಗಳು
ತಲಕಾಡು ಗಂಗರು

ಪಶ್ಚಿಮ ಗಂಗ ರಾಜವಂಶ ಅಥವಾ ತಲಕಾಡು ಗಂಗರು ಎಂದು ಕರೆಯಲಾಗುವ ಈ ಅರಸೊತ್ತಿಗೆಯು ಕರ್ನಾಟಕದ ಅತ್ಯಂತ ಪ್ರಾಚೀನ ಮತ್ತು ಪ್ರಸಿದ್ಧ ರಾಜವಂಶಗಳಲ್ಲಿ ಒಂದು. ತಮಿಳು ಸಂಸ್ಕೃತಿ ಮತ್ತು ಕರ್ನಾಟಕಗಳ ನಡುವೆ ಇದ್ದ ಸಂಬಂಧಗಳನ್ನು ಕುರಿತ ಬಹಳ ಬೆಲೆಬಾಳುವ ಮಾಹಿತಿಗಳನ್ನು ಈ ರಾಜವಂಶದ ಇತಿಹಾಸವು ದೊರಕಿಸಿಕೊಡುತ್ತದೆ. ಕರ್ನಾಟಕದ ಸಂಸ್ಕೃತಿಯ ದ್ರಾವಿಡ ನೆಲೆಗಳನ್ನು ಅರ್ಥ ಮಾಡಿಕೊಳ್ಳಲು ಇದರಿಂದ ನೆರವಾಗಿದೆ. ಈ ರಾಜವಂಶವು ಕ್ರಿ.ಶ. ನಾಲ್ಕನೆಯ ಶತಮಾನದಷ್ಟು ಹಿಂದೆಯೇ ಅಸ್ತಿತ್ವಕ್ಕೆ ಬಂದಿತು.(ಕ್ರಿ.ಶ. 350) ಈ ವಂಶವು ಜೈನಮುನಿಗಳಾದ ಸಿಂಹನಂದಿ ಆಚಾರ್ಯರ ಮಾರ್ಗದರ್ಶನದಲ್ಲಿ ರೂಪಿತವಾಯಿತೆಂಬ ಊಹೆಗೆ ಖಚಿತವಾದ ಪುರಾವೆಗಳು ಸಿಕ್ಕಿಲ್ಲ. ಮೊದಮೊದಲಿನ ಗಂಗ ದೊರೆಗಳು ವೈದಿಕ ಹಿನ್ನೆಲೆಯಿಂದ ಬಂದವರೆಂದೇ ತೋರುತ್ತದೆ. ಈ ರಾಜ್ಯವನ್ನು ಸ್ಥಾಪಿಸಿದವನು ಕೊಂಗುಣಿವರ್ಮ. ಕುವಳಾಲಪುರವು(ಇಂದಿನ ಕೋಲಾರ) ಅವನ ರಾಜಧಾನಿಯಾಗಿತ್ತು. ಆದರೆ, ಕಾಲಕ್ರಮದಲ್ಲಿ ರಾಜಧಾನಿಯು, ಇಂದು ತಲಕಾಡು ಎಂದು ಪ್ರಸಿದ್ಧವಾಗಿರುವ, ತಲವನಪುರಕ್ಕೆ ಸ್ಥಳಾಂತರವಾಯಿತು. ಈ ಬದಲಾಔಣೆಯು ಅವಿನೀತ (ಕ್ರಿ.ಶ. 469-529) ಎಂಬ ರಾಜನ ಆಳ್ವಿಕೆಯಲ್ಲಿ ನಡೆಯಿತು. ತಲಕಾಡು ದಟ್ಟವಾದ ಕಾಡುಗಳಿಂದ ತುಂಬಿದ್ದು,, ಆ ಹೆಸರು ಅದೇ ಕಾರಣದಿಂದ ಬಂದಿರಬಹುದು. ಗಂಗರ ರಾಜಲಾಂಛನವು ಆನೆಯಾಗಿರುವುದೂ ಅದೇ ಕಾರಣದಿಂದ. ಗಂಗ ವಂಶದ ಮೊದಮೊದಲ ಅರಸುಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಿಲ್ಲ. ಅವರ ಕಾಲಕ್ಕೆ ಸೇರಿದ ಅನೇಕ ಶಾಸನಗಳನ್ನು ಬಿ.ಎಲ್.ರೈಸ್ ಅವರು ವಿಶ್ವಸನೀಯವಲ್ಲದ ಕೂಟಶಾಸನಗಳೆಂದು ತೀರ್ಮಾನಿಸಿದ್ದಾರೆ. ಆದ್ದರಿಂದ ಅನಿಶ್ಚಿತತೆಯು ಇನ್ನಷ್ಟು ಜಾಸ್ತಿಯಾಗಿದೆ. ಅನೇಕ ಇತಿಹಾಸಜ್ಞರು ಮೊದಲಿನಿಂದ ಕೊನೆಯವರೆಗೆ, ತಲಕಾಡೇ ಗಂಗರ ರಾಜಧಾನಿಯಾಗಿತ್ತೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

 

ಗಂಗ ಸಾಮ್ರಾಜ್ಯವನ್ನು ಆಳಿದ ಕೆಲವು ಮುಖ್ಯ ರಾಜರುಗಳ ಹೆಸರು ಮತ್ತು ಆಳ್ವಿಕೆಯ ಕಾಲಗಳು ಹೀಗಿವೆ:

 1. ಕೊಂಗುಣೀವರ್ಮ, (ಕ್ರಿ.ಶ. 325-350)
 2. ಮಾಧವ, (ಕ್ರಿ.ಶ. 350-375)
 3. ಆರ್ಯವರ್ಮ, (ಕ್ರಿ.ಶ. 375-400)
 4. ಮಾಧವ-3, (ಕ್ರಿ.ಶ. 440-469)
 5. ಅವಿನೀತ, (ಕ್ರಿ.ಶ. 469-529)
 6. ದುರ್ವಿನೀತ, (ಕ್ರಿ.ಶ. 529-579)
 7. ಶ್ರೀವಿಕ್ರಮ, (ಕ್ರಿ.ಶ. 629-654)
 8. ಭೂವಿಕ್ರಮ, (ಕ್ರಿ.ಶ. 654-679)
 9. ಶಿವಮಾರ-1, (ಕ್ರಿ.ಶ. 679-725)
 10. ಶ್ರೀಪುರುಷ, (ಕ್ರಿ.ಶ. 725-788)
 11. ಸೈಗೊಟ್ಟ ಶಿವಮಾರ, (ಕ್ರಿ.ಶ. 788-816)
 12. ರಾಚಮಲ್ಲ, (ಕ್ರಿ.ಶ. 816-843)
 13. ನೀತಿಮಾರ್ಗ ಎರೆಗಂಗ (ಕ್ರಿ.ಶ. 843-870)
 14. ರಾಚಮಲ್ಲ-2 (ಕ್ರಿ.ಶ. 870-919)
 15. ಎರೆಗಂಗ
 16. ಬೂತುಗ-2 (ಕ್ರಿ.ಶ. 936-961)
 17. ಮಾರಸಿಂಹ-2 (ಕ್ರಿ.ಶ. 963-974)
 18. ರಾಚಮಲ್ಲ-3 (ಕ್ರಿ.ಶ. 974-999)

ಅವಿನೀತನು ಪಟ್ಟಕ್ಕೆ ಬಂದ ನಂತರದ ದಾಖಲೆಗಳು ವಿಶ್ವಾಸಾರ್ಹವಾದ ಮಾಹಿತಿಗಳನ್ನು ನೀಡುತ್ತವೆ. ಈ ರಾಜರುಗಳಲ್ಲಿ ದುರ್ವಿನೀತ, ಭೂವಿಕ್ರಮ, ಶ್ರೀಪುರುಷ, ಸೈಗೊಟ್ಟ ಶಿವಮಾರ, ಮಾರಸಿಂಹ-2 ಮತ್ತು ಇಮ್ಮಡಿ ರಾಚಮಲ್ಲರು ಹೆಸರುವಾಸಿಯಾದವರು. ರಾಜ್ಯ ಸಂರಕ್ಷಣೆ ಮತ್ತು ವಿಸ್ತರಣೆಗಳಲ್ಲಿ ಅವರು ಮಹತ್ವದ ಪಾತ್ರವನ್ನು ವಹಿಸಿದರು. ಗಂಗರು ಸದಾ ಸರ್ವದಾ ಚೋಳರು, ಪಲ್ಲವರು, ರಾಷ್ಟ್ರಕೂಟರು ಮತ್ತು ಹೊಯ್ಸಳರ ಸಂಗಡ ನಿರಂತರವಾದ ಸಂಘರ್ಷಗಳಲ್ಲಿ ತೊಡಗುವುದು ಅನಿವಾರ್ಯವಾಗಿತ್ತು. ಪುನ್ನಾಟರಂತಹ ಚಿಕ್ಕ ಪುಟ್ಟ ರಾಜವಂಶಗಳು ಗಂಗರ ಸಂಗಡ ಮೈತ್ರಿಯಿಂದಲೇ ಇದ್ದವು. ದುರ್ವಿನೀತನು ಪಲ್ಲವರು ಹಾಗೂ ಕದಂಬರೊಂದಿಗೆ ಯುದ್ಧಗಳನ್ನು ನಡೆಸಿ ಜಯಶಾಲಿಯಾದನು. ಅವನ ಸಾಮ್ರಾಜ್ಯವು ದಕ್ಷಿಣದಲ್ಲಿ ತಮಿಳುನಾಡಿನ ಕೊಯಮತ್ತೂರಿನಿಂದ ಮೊದಲಾಗಿ, ಉತ್ತರದಲ್ಲಿ ಬಳ್ಳಾರಿಯವರೆಗೆ ಹರಡಿತ್ತು. ಅವನು ಕಲೆ ಮತ್ತು ಸಾಹಿತ್ಯಗಳ ಪೋಷಕನೂ ಸ್ವತಃ ಕವಿಯೂ ಆಗಿದ್ದನು. ಅವನು ಶಬ್ದಾವತಾರ ಎಂಬ ಗ್ರಂಥವನ್ನು ಬರೆದಿದ್ದಾನೆ ಹಾಗೂ ಭಾರವಿಯಕಿರಾತಾರ್ಜುನೀಯಕ್ಕೆ ವ್ಯಾಖ್ಯಾನವನ್ನು ರಚಿಸಿದ್ದಾನೆ. ಅವನು ಗುಣಾಢ್ಯನ ವಡ್ಡಕಥಾ ಎಂಬ ಕೃತಿಯನ್ನು ಕನ್ನಡಿಸಿರುವನೆಂದೂ ಹೇಳಲಾಗಿದೆ. ಭೂವಿಕ್ರಮನು ಪಲ್ಲವರೊಂದಿಗೆ ನಡೆಸಿದ ಯುದ್ಧಗಳಿಗಾಗಿ ಪ್ರಸಿದ್ಧನಾಗಿದ್ದಾನೆ. ಗಂಗ ರಾಜರುಗಳಲ್ಲಿಯೇ ಹೆಸರಾಂತ ಶ್ರೀಪುರುಷನು ಬಹಳ ಪರಾಕ್ರಮಿಯಾಗಿದ್ದನು. ಅವನು ಒಂದು ಕಡೆ ನಂದಿವರ್ಮ ಪಲ್ಲವವರ್ಮನನ್ನು ಸೋಲಿಸಿದರೆ, ಇನ್ನೊಂದು ಗಡಿಯಲ್ಲಿ, ರಾಷ್ಟ್ರಕೂಟರನ್ನು ಬಳ್ಳರಿ ಜಿಲ್ಲೆಯ ಕಂಪ್ಲಿಯವರೆಗೆ ಹಿಮ್ಮೆಟ್ಟಿಸಿದನು. ಆಡಳಿತದಲ್ಲಿ ಅನೇಕ ಸುಧಾರಣೆಗಳನ್ನು ಜಾರಿಗೆ ತಂದ ಶ್ರೀಪುರುಷನು ಗಜಶಾಸ್ತ್ರವೆಂಬ ಕೃತಿಯನ್ನೂ ರಚಿಸಿದ್ದಾನೆ. ಶ್ರೀಪುರುಷರು ತಮ್ಮ ಪರಮಾಧಿಕಾರವನ್ನು ರಾಷ್ಟ್ರಕೂಟರಿಗೆ ಬಿಟ್ಟುಕೊಟ್ಟು ಅವರ ಸಾಮಂತರಾಗಬೇಕಾಯಿತು. ಸೈಗೊಟ್ಟ ಶಿವಮಾರನಂತೂ ರಾಷ್ಟ್ರಕೂಟರ ಒಳಜಗಳಗಳ ಪಗಡೆಯಾಟದಲ್ಲಿ ದಾಳದಂತೆ ಬಳಕೆಯಾದನು. ಅವನು ತನ್ನ ಬದುಕಿನ ಸಾಕಷ್ಟು ಭಾಗವನ್ನು ಸೆರೆಮನೆಯಲ್ಲಿಯೇ ಕಳೆಯಬೇಕಾಯಿತು. ಅವನು ಗಜಾಷ್ಟಕ ಮತ್ತುಸೇತುಬಂಧ ಎಂಬ ಕೃತಿಗಳನ್ನು ರಚಿಸಿದ್ದಾನೆ. ಶಿವಮಾರನು ಜೈನಧರ್ಮಕ್ಕೆ ಮತಾಂತರ ಹೊಂದಿದ ಮೊಟ್ಟ ಮೊದಲ ಗಂಗ ದೊರೆ. ಇಮ್ಮಡಿ ಮಾರಸಿಂಹನು ರಾಷ್ಟ್ರಕೂಟರ ನಿಷ್ಠಾವಂತ ಬೆಂಬಲಿಗನಾಗಿದ್ದು, ಅವರಿಗಾಗಿ ಅನೇಕ ಯುದ್ಧಗಳನ್ನು ಗೆದ್ದುಕೊಟ್ಟನು. ಕ್ರಮೇಣ ಗಂಗ ದೊರೆಗಳು ರಾಜಕೀಯ ಸನ್ನಿವೇಶದ ಮೇಲಿನ ಹಿಡಿತವನ್ನು ಕಳೆದುಕೊಂಡರು. ಚೋಳರು ಮತ್ತು ಚಾಳುಕ್ಯರು ಪ್ರಬಲರಾಗಿ ಗಂಗವಂಶವು ಅವಸಾನವನ್ನು ಪಡೆಯಿತು.

ಮೂವರು ಗಂಗ ರಾಜರುಗಳಿಗೆ ಸೇವೆ ಸಲ್ಲಿಸಿದ ಚಾವುಂಡರಾಯನು ಹೆಸರುವಾಸಿಯಾದ ವೀರನೂ ಕಲಾಪೋಷಕನೂ ಆಗಿದ್ದನು. ಅವನು ಶ್ರವಣಬೆಳಗೊಳದ ಬಾಹುಬಲಿ ವಿಗ್ರಹದ ಸ್ಥಾಪಕನೆಂದು ಅಂತೆಯೇ ಕವಿ ರನ್ನನಿಗೆ ಆಶ್ರಯ ನೀಡಿದವನೆಂದು ಪ್ರಸಿದ್ಧನಾಗಿದ್ದಾನೆ.

ಗಂಗ ರಾಜ್ಯವು, ಇಂದಿನ ಕರ್ನಾಟಕದ ಕೋಲಾರ, ಮೈಸೂರು, ಬೆಂಗಳೂರು, ತುಮಕೂರು ಮತ್ತು ಮಂಡ್ಯ ಜಿಲ್ಲೆಗಳನ್ನು ಒಳಗೊಂಡಿತ್ತು. ಈ ಪ್ರದೇಶವನ್ನು ಗಂಗವಾಡಿಯೆಂದು ಕರೆಯುತ್ತಿದ್ದರು. ಆದರೆ, ಬೇರೆ ಬೇರೆ ಕಾಲಖಂಡಗಳಲ್ಲಿ, ಅದು ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ಬಳ್ಳರಿ ಮತ್ತು ಧಾರವಾಡ ಜಿಲ್ಲೆಗಳ ಮೇಲೂ ಹಿಡಿತವನ್ನು ಸಾಧಿಸಿತ್ತು. ಆಗೀಗ ತಮಿಳುನಾಡಿನ ಸೇಲಂ ಮತ್ತು ಕೊಯಮತ್ತೂರುಗಳೂ ಅವರ ಅಧೀನದಲ್ಲಿ ಇರುತ್ತಿದ್ದವು. ತಲಕಾಡು ಅವರ ಮುಖ್ಯ ರಾಜಧಾನಿಯಾಗಿತ್ತು. ಮಣ್ಣೆ(ಮಾನ್ಯಪುರ) ಮತ್ತು ಮಂಕುಂಡಗಳು(ಮನಕುಂಡ) ಪ್ರಾದೇಶಿಕ ರಾಜಧಾನಿಗಳಾಗಿದ್ದವು. ಅವರು ಮೊದಲು ವೈದಿಕ ಧರ್ಮಕ್ಕೆ ಸೇರಿದ್ದು, ಅನಂತರ ಜೈನಧರ್ಮಕ್ಕೆ ಮತಾಂತರ ಹೊಂದಿದರು. ಏನೇ ಆದರೂ ಅವರು ಜಾತ್ಯತೀತವಾದ ಧೋರಣೆಗಳನ್ನು ಹೊಂದಿದ್ದು, ಎಲ್ಲ ಧರ್ಮಗಳನ್ನೂ ಪ್ರೋತ್ಸಾಹಿಸುತ್ತಿದ್ದರು. ಅವರು ಕೆರೆ ಕಾಲುವೆಗಳನ್ನು ನಿರ್ಮಿಸುವುದರ ಮೂಲಕ ಬೇಸಾಯಕ್ಕೆ ಉತ್ತೇಜನ ನೀಡಿದರು. ಸುಂಕಗಳನ್ನು ವಿಧಿಸುವುದನ್ನು ಒಂದು ವ್ಯವಸ್ಥೆಗೆ ಒಳಪಡಿಸುವುದರ ಮೂಲಕ ವಾಣಿಜ್ಯವನ್ನೂ ಪೋಷಿಸಿದರು. ಅವರಲ್ಲಿ ಕೆಲವರು ಸ್ವತಃ ಸಾಹಿತಿಗಳಾದರೆ, ಎಲ್ಲ ದೊರೆಗಳೂ ಕಲೆ ಮತ್ತು ಸಂಸ್ಕೃತಿಗಳ ಪೋಷಕರಾಗಿದ್ದರು.

ಗಂಗರ ಕಾಲದ ವಾಸ್ತುಶಿಲ್ಪ ಮತ್ತು ಮೂರ್ತಿಶಿಲ್ಪಗಳಿಗೆ ಅಂತಹ ವಿಶಿಷ್ಟ ಲಕ್ಷಣಗಳೇನೂ ಇಲ್ಲ. ಅವರ ಕಾಲದಲ್ಲಿ ಅನೇಕ ದೇವಾಲಯಗಳು ಮತ್ತು ಬಸದಿಗಳು ನಿರ್ಮಿತವಾದರೂ ಅವು ಅನನ್ಯವಲ್ಲ. ಮಣ್ಣೆ, ನರಸಮಂಗಲ, ಕೋಲಾರ, ಕಿತ್ತೂರು, ನಂದಿಗಳಲ್ಲಿರುವ ದೇವಾಲಯಗಳು ಹಾಗೂ ಶ್ರವಣಬೆಳಗೊಳದಲ್ಲಿರುವ ಚಾವುಂಡರಾಯನ ಬಸದಿ ಇವುಗಳಲ್ಲಿ ಮುಖ್ಯವಾದವು. ಗಂಗರ ಕಾಲದ ಶಾಸನಗಳಲ್ಲಿ ತಾಮ್ರಪತ್ರಗಳು, ಶಿಲಾಶಾಸನಗಳು ಮತ್ತು ಸ್ಮಾರಕಶಿಲೆಗಳೆಂಬ ಮೂರೂ ಪ್ರಕಾರಗಳನ್ನು ನೋಡಬಹುದು. ಗಂಗರ ತಾಮ್ರಶಾಸನಗಳ ಅಧಿಕೃತತೆಯನ್ನು ಕುರಿತಾದ ಅನುಮಾನಗಳು ಖಚಿತವಾದ ನಿಲುವುಗಳನ್ನು ತಳೆಯಲು ಅಡ್ಡಿಯಾಗಿವೆ. ಸಾಮಾನ್ಯವಾಗಿ, ತಾಮ್ರಶಾಸನಗಳು ಸಂಸ್ಕೃತದಲ್ಲಿದ್ದು ಶಿಲಾಶಾಸನಗಳು ಕನ್ನಡದಲ್ಲಿವೆ. ಈ ಶಾಸನಗಳು ಸುದೀರ್ಘವಾದ ಕಾಲಾವಧಿಯಲ್ಲಿ ರಚಿತವಾಗಿರುವುದರಿಂದ, ಅವುಗಳನ್ನು ಬಳಸಿಕೊಂಡು ಕನ್ನಡ ಲಿಪಿಯ ಬೆಳವಣಿಗೆಯನ್ನು ಗುರುತಿಸಲು ಸಾಧ್ಯ. ಸ್ಮಾರಕಶಿಲೆಗಳು, ವೈವಿಧ್ಯಮಯವಾಗಿದ್ದು ಅನೇಕ ವಸ್ತುಗಳನ್ನು ಕುರಿತಂತೆ, ಇವೆ. ಉದಾಹರಣೆಗೆ ಆತಕೂರು ಶಾಸನವು ಕಾಳಿ ಎಂಬ ನಾಯಿಯ ನಿಷ್ಠೆಯನ್ನು ಪ್ರಶಂಸಿಸುತ್ತದೆ. ಕರ್ನಾಟಕದ ನಾಣ್ಯಶಾಸ್ತ್ರಕ್ಕೂ ಗಂಗರ ಕೊಡುಗೆ ಅಷ್ಟಾಗಿ ಇಲ್ಲ. ಗಂಗರ ಲಾಂಛನವಾದ ಆನೆಯ ಗುರುತಿದ್ದು ಯಾವುದೇ ಲಿಪಿಯೂ ಇಲ್ಲದ ಐದು ನಾಣ್ಯಗಳು ಗಂಗರ ಕಾಲಕ್ಕೆ ಸೇರಿದವೆಂದು ಎಂ.ಎಚ್. ಕೃಷ್ಣ ಅವರು ಅಭಿಪ್ರಾಯ ಪಟ್ಟಿದ್ದಾರೆ.

 

ತಲಕಾಡಿನ ಗಂಗರಲ್ಲದೆ ಗಂಗ ರಾಜವಂಶದ ಬೇರೆ ಕೆಲವು ಶಾಖೆಗಳೂ ಇವೆ. ಕಾದರವಳ್ಳಿಯ ಗಂಗರು, ಶಿವಮೊಗ್ಗದ ಮಂಡಳಿ ಗಂಗರು, ಕಡೂರಿನ ಸಮೀಪದ ಆಸಂದಿಯ ಗಂಗರು ಮತ್ತು ಕೋಲಾರದ ತಮಿಳು ಗಂಗರು ಅವರಲ್ಲಿ ಮುಖ್ಯರಾದ ಕೆಲವರು.

 

ಮುಂದಿನ ಓದು ಮತ್ತು ಲಿಂಕುಗಳು:

 1. ‘The Gangas of Talkad: A Monograph on the History of Mysore from the Fourth to the close of Eleventh Century’ by Mysore Venkata Krishna Rao, 1936, published by B.G.Paul.
 2. ‘History of the Western Gangas’ by B. Sheikh Ali, 1976, Prasaranga, Mysore University, Mysore.
 3. ‘The Western Gangas of Talkad’, R. Narasimhachar,1923
 4. ‘The Coins of Karnataka’, A.V. Narasimha Murthy, 1975, Geetha Book House, Mysore
 5. ‘Kongu Nadu, a history up to 1400’, V. Manickam, 2001, Makkal Veliyeedu
 6. ‘The Later Gangas: Mandali-thousand’, Hampa. Nagarajayya, 1999, Ankitha Prakashana, Bangalore
 7. ‘Early Gangas of Talakadu’, S. Srikantha Shastry, Mysore.
 8. ‘Rashtrakuta Relations with the Gangas of Talkad’, Shivanna, 1997, Prasaranga, University of Mysore, Mysore
 9. ‘Shangam Tamilagam mattu Kannada Naadu Nudi’, S. Settar, 2007, Abhinava, Bangalore
 10. Western Ganga Dynasty - Wikipedia, the free encyclopedia
 11. OurKarnataka.com: History og Karnataka: The Gangas of Talakad

 

ಮುಖಪುಟ / ನಾಡು, ಇತಿಹಾಸ ಮತ್ತು ಪ್ರಮುಖ ವ್ಯಕ್ತಿಗಳು