ಪಾರಂಪರಿಕ ತಿಳಿವಳಿಕೆಯ ಆಕರಗಳು
ಕಾವ್ಯಾವಲೋಕನ
  1. ಪುಸ್ತಕದ ಹೆಸರು: ಕಾವ್ಯಾವಲೋಕನ
  2. ಲೇಖಕನ ಹೆಸರು: ನಾಗವರ್ಮ-2
  3. ಕಾಲ: ಹನ್ನರಡನೆಯ ಶತಮಾನ (ಕ್ರಿ.ಶ. 1042?)
  4. ವಸ್ತು: ಕಾವ್ಯಮೀಮಾಂಸೆ (ಅಲಂಕಾರ ಶಾಸ್ತ್ರ)
  5. ಪರಿಚಯ: ಕಾವ್ಯಾವಲೋಕನವು ಅಲಂಕಾರಶಾಸ್ತ್ರವನ್ನು ಕುರಿತ ಕೃತಿ.ಆದರೆ, ಇದರಲ್ಲಿ ವ್ಯಾಕರಣವನ್ನು ಕುರಿತ ಶಬ್ದಸ್ಮೃತಿ ಎಂಬ ಇಡೀ ಅಧ್ಯಾಯವನ್ನು ಅಳವಡಿಸಲಾಗಿದೆ. ಕವಿರಾಜಮಾರ್ಗದಲ್ಲಿ ಬರುವ ಕೆಲವು ಉಲ್ಲೇಖಗಳನ್ನು ಬಿಟ್ಟರೆ, ಇದೇ ಕನ್ನಡ ಭಾಷೆಯ ಮೊದಲ ವ್ಯಾಕರಣ. ಕಾವ್ಯಾವಲೋಕನದಲ್ಲಿ ಐದು ಅಧ್ಯಾಯಗಳಿವೆ. ಅವುಗಳು ಅನುಕ್ರಮವಾಗಿ ಶಬ್ದಸ್ಮೃತಿ, ಕಾವ್ಯಮಲವ್ಯಾವೃತ್ತಿ, ಗುಣವಿವೇಕ, ರೀತಿಕ್ರಮರಸನಿರೂಪಣ ಮತ್ತು ಕವಿಸಮಯ ಎಂಬ ತಲೆಬರೆಹಗಳನ್ನು ಪಡೆದಿದೆ. ವ್ಯಾಕರಣವನ್ನು ಕುರಿತ ಮೊದಲ ಅಧ್ಯಾಯವು ಸಂಧಿ, ನಾಮ, ಸಮಾಸ, ತದ್ಧಿತ ಮತ್ತು ಆಖ್ಯಾತಗಳೆಂಬ ಪರಿಕಲ್ಪನೆಗಳನ್ನು ಕನ್ನಡದ ಸಂದರ್ಭದಲ್ಲಿ ನಿರೂಪಿಸುತ್ತದೆ. ಇವು ಒಂದು ಭಾಷೆಗೆ ಅತ್ಯಗತ್ಯವಾದ ವ್ಯಾಕರಣಾಂಶಗಳು ಒಳಗೊಂಡಿವೆ. ನಾಗವರ್ಮನು ತನ್ನ ವಿವರಣೆಗಳಿಗೆ ಸರಿಯಾದ ಉದಾಹರಣೆಗಳನ್ನು, ಕನ್ನಡ ಕಾವ್ಯಗಳು ಮತ್ತು ಶಾಸ್ತ್ರಗ್ರಂಥಗಳಿಂದ ಆರಿಸಿ ಕೊಟ್ಟಿದ್ದಾನೆ. ಎರಡನೆಯ ಅಧ್ಯಾಯದಲ್ಲಿ, ಪದರಚನೆ ಮತ್ತು ವಾಕ್ಯರಚನೆಗಳಲ್ಲಿ ನುಸುಳಿಕೊಳ್ಳಬಹುದಾದ ದೋಷಗಳನ್ನು ಪ್ರತ್ಯೇಕ ಭಾಗಗಳಲ್ಲಿ ವಿವರಿಸಲಾಗಿದೆ. ಮೂರನೆಯ ಅಧಿಕರಣವು ಶಬ್ದಾಲಂಕಾರ ಮತ್ತು ಅರ್ಥಾಲಂಕಾರಗಳನ್ನು ವಿವರವಾಗಿ ಹೇಳುತ್ತದೆ. ಅಲ್ಲಿಯೇ, ಮಾರ್ಗ ಎಂಬ ವಿಷಯದ ಪ್ರಸ್ತಾಪವೂ ಬರುತ್ತದೆ. ಸುಪರಿಚಿತವಾದ ರೀತಿ ಮತ್ತು ರಸಗಳನ್ನು ನಾಲ್ಕನೆಯ ಅಧ್ಯಾಯದಲ್ಲಿ ನಿರೂಪಿಸಲಾಗಿದೆ. ಕವಿಸಮಯ ಎಂಬ ವಿಷಯವನ್ನು ಕುರಿತ ಮಾಹಿತಿಗಳನ್ನು ಕೊನೆಯ ಅಧ್ಯಾಯದಲ್ಲಿ ಕಾಣಬಹುದು. ಇಲ್ಲಿ ಕವಿಸಮಯದ ಪ್ರಭೇದಗಳಾದ ಅಸದಾಖ್ಯಾತಿ, ಸದಕೀರ್ತನ, ನಿಯಮಾರ್ಥ ಮತ್ತು ಐಕ್ಯ ಎಂಬ ನಾಲ್ಕು ಬಗೆಗಳನ್ನು ವಿವರವಾಗಿ ಪರಿಚಯಿಸಿದ್ದಾನೆ. ತನ್ನ ಪುಸ್ತಕವು, ಕವಿಗಳ ಕೈಗನ್ನಡಿಯೆಂದು ನಾಗರ್ನು ಹೇಳಿಕೊಂಡಿದ್ದಾನೆ. (ಕವಿಗಳ್ಗಿದು ಕೈಗನ್ನಡಿ)

     

  6. ಪ್ರಕಟಣೆಯ ಇತಿಹಾಸ:

ಅ. 1903, ಸಂ. ಆರ್. ನರಸಿಂಹಾಚಾರ್, ಬೆಂಗಳೂರು.( ಇಂಗ್ಲಿಷ್ ಪೀಠಿಕೆ, ಕವಿ-ಕಾವ್ಯ ವಿಚಾರ, ಕನ್ನಡ ಅಲಂಕಾರ ಶಾಸ್ತ್ರಗ್ರಂಥಗಳ ಪರಿಚಯ, ತೌಲನಿಕ ವಿಮರ್ಶೆ ಮುಂತಾದವುಗಳ ಸಹಿತ)

ಆ. 1939, ಸಂ. ಎಚ್. ಆರ್. ರಂಗಸ್ವಾಮಿ ಅಯ್ಯಂಗಾರ್, ಓರಿಯೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್, ಮೈಸೂರು.

ಇ. 1939, ಸಂ. ಶಿ.ಶಿ. ಬಸವನಾಳ ಮತ್ತು ಕೇಪು(ಕೆಂಪು?) ಶಂಕರನಾರಾಯಣ, ಕರ್ಣಾಟಕ ವಿದ್ಯಾವರ್ಧಕ ಸಂಘ, ಧಾರವಾಡ.

ಈ. 1964, ಮರುಮುದ್ರಣ, ಓರಿಯೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್’, ಮೈಸೂರು

 

  1. ಮುಂದಿನ ಓದು ಮತ್ತು ಲಿಂಕುಗಳು:

ಅ. ಕಾವ್ಯಾವಲೋಕನದ ಮೊದಲನೆಯ ಆವೃತ್ತಿಗೆ ಆರ್. ನರಸಿಂಹಾಚಾರ್ ಅವರು ಬರೆದಿರುವ ಮುನ್ನುಡಿ.

 

  1. ಅನುವಾದ

 

ಮುಖಪುಟ / ಪಾರಂಪರಿಕ ತಿಳಿವಳಿಕೆಯ ಆಕರಗಳು