ಪಾರಂಪರಿಕ ತಿಳಿವಳಿಕೆಯ ಆಕರಗಳು
ಕವಿರಾಜಮಾರ್ಗ

ಲೇಖಕ: ಶ್ರೀವಿಜಯ

2. ಕಾಲ: ಒಂಬತ್ತನೆಯ ಶತಮಾನ

3. ವಸ್ತು: ಕಾವ್ಯಮೀಮಾಂಸೆ, ಛಂದಸ್ಸು, ವ್ಯಾಕರಣ

4. ಕಿರು ಪರಿಚಯ: 'ಕವಿರಾಜಮಾರ್ಗ'ವು ಕನ್ನಡ ಭಾಷೆಯಲ್ಲಿ ಉಪಲಬ್ಧವಾಗಿರುವ ಮೊಟ್ಟಮೊದಲ ಕೃತಿ. ಅದು ಕಾವ್ಯಮೀಮಾಂಸೆ, ಛಂದಸ್ಸು, ವ್ಯಾಕರಣ ಮುಂತಾದ ವಿಷಯಗಳನ್ನು ಒಳಗೊಂಡ ಸಾಹಿತ್ಯತತ್ವಕ್ಕೆ ಸಂಬಂಧಿಸಿದ ಬರವಣಿಗೆಯೆನ್ನುವುದು ಕುತೂಹಲಕರವಾದ ಸಂಗತಿ. ಇದಲ್ಲದೆ, 'ಕವಿರಾಜಮಾರ್ಗ'ವು ಕರ್ನಾಟಕದ ನಾಡು, ನುಡಿ, ಜನ ಮತ್ತು ಸಂಸ್ಕೃತಿಗಳನ್ನು ಕುರಿತ ಸಮೃದ್ಧ ಮಾಹಿತಿಯನ್ನು ಒಳಗೊಂಡಿದೆ. ನಮ್ಮ ನಾಡಿನ ಭೌಗೋಳಿಕವಾದ ಮತ್ತು ಸಾಂಸ್ಕೃತಿಕವಾದ ಗಡಿಗೆರೆಗಳನ್ನು ಗುರುತಿಸುವ ಮೊದಲ ಪ್ರಯತ್ನವನ್ನು ಮಾಡಿದ ಪುಸ್ತಕವೂ 'ಕವಿರಾಜಮಾರ್ಗ'ವೇ ಆಗಿದೆ. ಆದರೂ ಈ ಗ್ರಂಥವು ದಕ್ಷಿಣ ಭಾರತದ ಲಾಕ್ಷಣಿಕನಾದ ದಂಡಿಯ ಸಂಸ್ಕೃತ ಕೃತಿ 'ಕಾವ್ಯಾದರ್ಶ'ವನ್ನು ಸಾಕಷ್ಟು ಅವಲಂಬಿಸಿದೆ.

'ಕವಿರಾಜಮಾರ್ಗ'ವನ್ನು ಬರೆದವರು ಯಾರೆಂಬುದನ್ನು ಕುರಿತ ಚರ್ಚೆಯು ಈಗ ಶ್ರೀವಿಜಯನ ಪರವಾಗಿ ತೀರ್ಮಾನವಾಗಿದೆ. ಅವನು ಕ್ರಿ.ಶ.814-878 ರ ಅವಧಿಯಲ್ಲಿ ಆಳ್ವಿಕೆ ನಡೆಸಿದ ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಷ ನೃಪತುಂಗನ ಆಸ್ಥಾನದಲ್ಲಿ ಇದ್ದ ಲೇಖಕ. ಆದರೂ ಕೂಡ ಆ ಕೃತಿಯೊಳಗಿರುವ ವಿಷಯಗಳನ್ನು ಕುರಿತು ರಾಜ ಮತ್ತು ಕವಿಗಳ ನಡುವೆ ಸಹಮತವಿರುವಂತೆ ತೋರುತ್ತದೆ. ಕೃತಿಯಲ್ಲಿಯೇ ಬರುವ 'ನೃಪತುಂಗದೇವಾನುಮತ' ಎಂಬ ಮಾತು ಇದಕ್ಕೆ ಸಾಕ್ಷಿಯಾಗಿದೆ.

ಈ ಕೃತಿಯಲ್ಲಿ ಮೂರು ಪರಿಚ್ಛೇದಗಳಿವೆ. ಮೊದಲನೆಯ ಅಧ್ಯಾಯವು ತಿರುಳುಗನ್ನಡ ಪ್ರದೇಶ, ಕರ್ನಾಟಕದ ಗಡಿಗಳು, ಕನ್ನಡದ ಉಪಭಾಷೆಗಳು ಹಾಗೂ ಪ್ರಮಾಣ ಭಾಷೆಯನ್ನು ಕುರಿತಾದ ಮಾಹಿತಿಯನ್ನು ನೀಡುತ್ತದೆ. ಕವಿಯು ಕನ್ನಡಿಗರ ನಿಷ್ಪಕ್ಷಪಾತವೂ ನ್ಯಾಯಪರವೂ ಬುದ್ಧಿಶಾಲಿಯೂ ಆದ ಸ್ವಭಾವದ ಬಗ್ಗೆ ಮಾತನಾಡುತ್ತಾನೆ. ಅನಂತರ ಹತ್ತನೆಯ ಶತಮಾನದ ಕೊನೆಯವರೆಗಿನ ಕನ್ನಡ ಸಾಹಿತ್ಯದ ಪಕ್ಷಿನೋಟವನ್ನು ಕೊಡಲು ಪ್ರಯತ್ನಿಸುತ್ತಾನೆ. ಗದ್ಯ ಮತ್ತು ಪದ್ಯಗಳಲ್ಲಿ ಕೃತಿರಚನೆ ಮಾಡುತ್ತಿದ್ದ ಸಾಹಿತಿಗಳ ಪಟ್ಟಿಯನ್ನು ಕೊಡುತ್ತಾನೆ. ಆಮೇಲೆ ಕನ್ನಡ ಸಾಹಿತ್ಯದ ಕೆಲವು ವಿಶಿಷ್ಟ ಲಕ್ಷಣಗಳನ್ನು ವಿವರಿಸುತ್ತಾ ಬೆದಂಡೆ, ಚತ್ತಾಣ, ಒನಕೆವಾಡು, ಬಾಜನೆಗಬ್ಬ ಮುಂತಾದ ಸಾಹಿತ್ಯರೂಪಗಳ ಪರಿಚಯ ಮಾಡಿಕೊಡುತ್ತಾನೆ. ಕಾವ್ಯದಲ್ಲಿ ಇರಬಹುದಾದ ಗುಣ ದೋಷಗಳ ವಿವರಣೆಯನ್ನೂ ಇಲ್ಲಿಯೇ ಕೊಡಲಾಗಿದೆ.

'ಕವಿರಾಜಮಾರ್ಗ'ದ ಎರಡನೆಯ ಅಧ್ಯಾಯವು ಶಬ್ದಾಲಂಕಾರಗಳ ವಿವರಣೆಗೆ ಮೀಸಲಾಗಿದೆ. ಇವು ಭಾಷೆಯ ಧ್ವನಿರಚನೆ ಮತ್ತು ಪದರಚನೆಯ ಹಂತದಲ್ಲಿ ಕೆಲಸಮಾಡಿ ಕಾವ್ಯಸೌಂದರ್ಯವನ್ನು ಹೆಚ್ಚಿಸುವ ಅಲಂಕಾರಗಳು. ಈ ಅಲಂಕಾರಗಳನ್ನು ಪ್ರಾಚೀನ ಕಾವ್ಯಗಳಿಂದ ಆಯ್ದು ತೆಗೆದ ಉದಾಹರಣೆಗಳ ಮೂಲಕ ಸ್ಪಷ್ಟಪಡಿಸಲಾಗಿದೆ. ಇಂತಹ ಉಲ್ಲೇಖಗಳು ಕನ್ನಡಸಾಹಿತ್ಯದ ಪ್ರಾಚೀನತೆಯನ್ನು ನಿರ್ಧರಿಸುವ ಕೆಲಸದಲ್ಲಿ ಬಹಳ ಉಪಯುಕ್ತವಾಗಿವೆ. ಮೂರನೆಯ ಅಧ್ಯಾಯವು ಭಾಷೆಯ ಅರ್ಥದ ನೆಲೆಯಲ್ಲಿ ಸೌಂದರ್ಯವನ್ನು ಸೃಷ್ಟಿಸುವ ಅರ್ಥಾಲಂಕಾರಗಳನ್ನು ಪರಿಚಯ ಮಾಡಿಕೊಡುತ್ತದೆ.

ಸಂಸ್ಕೃತ ಗ್ರಂಥಗಳ ಮೇಲೆ ಶ್ರೀವಿಜಯನಿಗಿದ್ದ ಅವಲಂಬನೆಯು, ಆ ಕಾಲದಲ್ಲಿ ಕನ್ನಡ ಸಂಸ್ಕೃತಿಯು ಎದುರಿಸುತ್ತಿದ್ದ ಸಮಸ್ಯೆಗಳನ್ನು ಅರ್ಥಪೂರ್ಣವಾಗಿ ನಿರ್ವಹಿಸುವುದರಲ್ಲಿ ಅವನಿಗೆ ಅಡ್ಡಿಯಾಗಿಲ್ಲ. ಶ್ರೀವಿಜಯನು ಸಂಸ್ಕೃತದಂತಹ ಅನ್ಯ ಭಾಷೆಗಳನ್ನು ಸಂಪೂರ್ಣವಾಗಿ ದೂರವಿಡಬೇಕೆನ್ನುವ ಧೋರಣೆಯನ್ನು ತಳೆಯುವುದಿಲ್ಲ. ವಾಸ್ತವವಾಗಿ ದ್ರಾವಿಡ ಭಾಷೆಯಾಗಿದ್ದು, ಅದಕ್ಕೆ ಅನುಗುಣವಾದ ಗುಣಲಕ್ಷಣಗಳನ್ನು ಹೊಂದಿದ್ದ ಕನ್ನಡವು ಸಂಸ್ಕೃತವನ್ನು ಸ್ವೀಕರಿಸುವ ಕೆಲಸದಲ್ಲಿ ಪಡೆದುಕೊಂಡಿತು ಹಾಗೆಯೇ ತನ್ನ ಮೂಲ ನೆಲೆಗಳನ್ನು ಸ್ವಲ್ಪಮಟ್ಟಿಗೆ ಕಳೆದುಕೊಂಡಿತು. ಕಳೆದ ಎರಡು ದಶಕಗಳಲ್ಲಿ ಕವಿರಾಜಮಾರ್ಗವನ್ನು ಕುರಿತು ಸಾಕಷ್ಟು ಚರ್ಚೆ ನಡೆದಿದೆ. ಕನ್ನಡದ ಸಾಹಿತ್ಯ ಪರಂಪರೆಯನ್ನು ರೂಪಿಸುವ ಕೆಲದಲ್ಲಿ ಅದು ವಹಿಸಿರುವ ಪಾತ್ರವನ್ನು ಈಗ ಗುರುತಿಸಲಾಗಿದೆ. ಶೆಲ್ಡನ್ ಪೊಲಾಕ್, ಕೆ.ವಿ.ಸುಬ್ಬಣ್ಣ, ಡಿ.ಆರ್. ನಾಗರಾಜ, ಕೀರ್ತಿನಾಥ ಕುರ್ತಕೋಟಿ, ಕೆ.ವಿ. ನಾರಾಯಣ, ಷ. ಶೆಟ್ಟರ್ ಮತ್ತು ಇತರ ಅನೇಕ ವಿದ್ವಾಂಸರು ಕವಿರಾಜಮಾರ್ಗವನ್ನು ಕನ್ನಡದ ಆದ್ಯ ಕೃತಿಗಳಲ್ಲಿ ಒಂದೆಂದು ಪರಿಗಣಿಸಿದ್ದಾರೆ.

5. ಪ್ರಕಟಣೆಯ ವಿವರಗಳು 1. 'ನೃಪತುಂಗದೇವ ವಿರಚಿತ ಕವಿರಾಜಮಾರ್ಗಂ' ಸಂ. ಕೆ.ಬಿ.ಪಾಠಕ್, 1896, ಬೆಂಗಳೂರು 2. 'ಕರ್ನಾಟಕ ಕವಿರಾಜಮಾರ್ಗಂ', ಸಂ. ವೆಂಕಟರಾವ್ ಎ. ಮತ್ತು ಶೇಷಯ್ಯಂಗಾರ್ ಎಚ್., 1930, ಮದ್ರಾಸ್ ವಿಶ್ವವಿದ್ಯಾಲಯ, ಮದ್ರಾಸ್ 3. 'ನೃಪತುಂಗ ದೇವಾನುಮತಂ ಶ್ರೀವಿಜಯ ಪ್ರಭೂತಂ ಕವಿರಾಜಮಾರ್ಗಂ', ಸಂ. ಕೆ. ಕೃಷ್ಣಮೂರ್ತಿ, 1983, ಐ.ಬಿ.ಎಚ್. ಪ್ರಕಾಶನ, ಬೆಂಗಳೂರು 4. 'ಶ್ರೀವಿಜಯ ಕೃತ ಕವಿರಾಜಮಾರ್ಗ', ಸಂ. ಎಂ.ವಿ. ಸೀತಾರಾಮಯ್ಯ, 1968, ಕರ್ನಾಟಕಸಂಘ, ಸರ್ಕಾರೀ ಕಾಲೇಜು, ಬೆಂಗಳೂರು.

6. ಮುಂದಿನ ಓದು

1. 'ಕವಿರಾಜಮಾರ್ಗ ಪ್ರಶಸ್ತಿ', ಭೀಮರಾವ್ ಚಿಟಗುಪ್ಪಿ, ಮನ್ವಂತರ ಪ್ರಕಾಶನ, ಧಾರವಾಡ
2. 'ಕವಿರಾಜಮಾರ್ಗ ವಿವೇಕ', ಮುಳಿಯ ತಿಮ್ಮಪ್ಪಯ್ಯ, 1973, ಮೈಸೂರು
3. 'ಕವಿರಾಜಮಾರ್ಗ',(ಕವಿ-ಕಾವ್ಯ ಪರಂಪರೆ) ಸಂ. ವಿ. ಸೀತಾರಾಮಯ್ಯ, 1973, ಐ.ಬಿ.ಎಚ್. ಪ್ರಕಾಶನ, ಬೆಂಗಳೂರು
4. 'ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ', ಎಂ.ಎಂ. ಕಲಬುರ್ಗಿ, 1973, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
5. 'ಕವಿರಾಜಮಾರ್ಗ ಸಾಂಸ್ಕೃತಿಕ ಮುಖಾಮುಖಿ', ಸಂ. ರಹಮತ್ ತರೀಕೆರೆ, 2000, ಕನ್ನಡ ವಿಶ್ವವಿದ್ಯಾಲಯ, ಹಂಪಿ
6. 'ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು', ಕೆ.ವಿ. ಸುಬ್ಬಣ್ಣ, 2000, ಅಕ್ಷರ ಪ್ರಕಾಶನ, ಹೆಗ್ಗೋಡು
7. 'ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ', ಷ. ಶೆಟ್ಟರ್, 2007, ಅಭಿನವ ಪ್ರಕಾಶನ, ಬೆಂಗಳೂರು
8. 'Literary Cultures in History Re constructions from South Asia', Ed. Sheldon I. Pollock, Berkley University of California Press, 2003.

ಮುಖಪುಟ / ಪಾರಂಪರಿಕ ತಿಳಿವಳಿಕೆಯ ಆಕರಗಳು