ಛಂದಸ್ಸು ಯಾವುದೇ ಭಾಷೆಯ ಕಾವ್ಯ ಮತ್ತು ಪದ್ಯರಚನೆಯ ಸಂಗಡವೇ
                                            ಹೆಣೆದುಕೊಂಡಿರುವ ಭಾಗ. ಭಾಷೆಯ ಲಯವಿನ್ಯಾಸಗಳು ಅದರ ವಿಶಿಷ್ಟ ಲಕ್ಷಣಗಳಿಗೆ ಹೊಂದಿಕೊಳ್ಳುವ ಬೇರೆಬೇರೆ
                                            ಅಳತೆಗೋಲುಗಳಿಂದ ತೀರ್ಮಾನವಾಗುತ್ತವೆ. ಬೇರೆ ಭಾಷೆಗಳ ಪ್ರಭಾವಗಳು, ಪಡೆದುಕೊಳ್ಳುವ ಭಾಷೆಯ ಸಾಮರ್ಥ್ಯಗಳನ್ನು
                                            ಹೆಚ್ಚು ಮಾಡಲೂ ಬಹುದು, ಕುಂದಿಸಲೂ ಬಹುದು. ಕನ್ನಡ ಭಾಷೆಯ ಛಂದೋರೂಪಗಳ ಬೆಳವಣಿಗೆಯ ಚಾರಿತ್ರಿಕ ಅಧ್ಯಯನವು,
                                            ಮೇಲೆ ಹೇಳಿದ ಸಂಗತಿಯನ್ನು ಖಚಿತಪಡಿಸುತ್ತದೆ. ಸಂಸ್ಕೃತ ಹಾಗೂ ಇಂಗ್ಲಿಷ್ ಭಾಷೆಗಳ ಪ್ರಭಾವವು ಕನ್ನಡಕ್ಕೆ
                                            ಲಾಭದಾಯಕವಾಗಿರುವಂತೆ ಮಾರಕವೂ ಆಗಿವೆ.
                                    
                                    
                                        ಕನ್ನಡವು ದ್ರಾವಿಡ ಭಾಷಾಕುಟುಂಬಕ್ಕೆ ಸೇರಿದೆ. ಅದು ತನ್ನ ಜೊತೆಗಾರರಾದ
                                            ತಮಿಳು, ಮಲಯಾಳಂ, ತೆಲುಗು, ತುಳು ಮುಂತಾದ ಭಾಷೆಗಳ ಸಂಗಡ ಅನೇಕ ಲಕ್ಷಣಗಳನ್ನು ಹಂಚಿಕೊಂಡಿದೆ. ಕನ್ನಡದ
                                            ಬಹು ಪ್ರಾಚೀನವಾದ ಮೌಖಿಕ ಸಾಹಿತ್ಯವು ಮೂಲದ್ರಾವಿಡಕ್ಕೆ ಸಹಜವಾಗಿದ್ದ ಛಂದೋಲಯ ಮತ್ತು ರೂಪಗಳನ್ನು
                                            ಬಳಸಿಕೊಂಡಿರಬೇಕು. ತಮಿಳು ಭಾಷೆಯ ಆದಿಕಾಲದ ಮೌಖಿಕಸಾಹಿತ್ಯವನ್ನು ಗಮನಿಸಿದಾಗ ಈ ಮಾತು ಸ್ಪಷ್ಟವಾಗುತ್ತದೆ.
                                            ಅಂತಹ ಆದಿಮ ಆಕರಗಳು ಕನ್ನಡದಲ್ಲಿ ಈಗ ಉಳಿದಿಲ್ಲ. ಆದರೂ ಕನ್ನಡದ ಛಂದೋಗ್ರಂಥಗಳು ದ್ರಾವಿಡಸಹಜವಾದ
                                            ವಿನ್ಯಾಸಗಳನ್ನು ಬಳಸಿಕೊಳ್ಳುವ ಏಳೆ, ಗೀತಿಕೆ, ತ್ರಿಪದಿ, ಮದನವತಿ ಮುಂತಾದ ರೂಪಗಳನ್ನು ಹೆಸರಿಸುತ್ತದೆ.
                                            ಆದರೆ, ಅವುಗಳನ್ನು ಬಳಸಿಯೇ ರಚಿತವಾಗಿರುವ ಪೂರ್ಣಪ್ರಮಾಣದ ಕಾವ್ಯಗಳು ಕನ್ನಡದಲ್ಲಿ ದೊರೆತಿಲ್ಲ. ಕನ್ನಡ
                                            ಛಂದಸ್ಸಿಗೂ ತಮಿಳು ಛಂದಸ್ಸಿಗೂ ಇರುವ ಹೋಲಿಕೆಯನ್ನು ಬಿ.ಎಂ.ಶ್ರೀಕಂಠಯ್ಯನವರು ಬಹಳ ಹಿಂದೆಯೇ ಗುರುತಿಸಿದ್ದಾರೆ.
                                    
                                    
                                        ಕನ್ನಡ ಛಂದಸ್ಸು ಸ್ವರಾಘಾತಗಳ ವಿನ್ಯಾಸಕ್ಕಿಂತ (ಸ್ಟ್ರೆಸ್ ಪ್ಯಾಟ್ರನ್ಸ್)
                                            ಹೆಚ್ಚಾಗಿ ಸ್ವರಪರಿಣಾಮಗಳ ವಿನ್ಯಾಸವನ್ನು (ಸಿಲಾಬಿಕ್ ಪ್ಯಾಟ್ರನ್ಸ್) ತನ್ನ ಮೂಲನೆಲೆಯಾಗಿ ಹೊಂದಿದೆ.
                                            ಕನ್ನಡ ಛಂದಸ್ಸಿನ ಅತಿ ಕಿರಿಯ ಮೂಲಮಾವನ್ನು ಮಾತ್ರೆ ಎಂದು ಕರೆಯುತ್ತಾರೆ. ಮಾತ್ರೆಗಳ ಗುಂಪನ್ನು ಗಣ
                                            ಎಂದು ಕರೆಯುತ್ತಾರೆ. ಮಾತ್ರೆಗಳ ವಿನ್ಯಾಸವನ್ನು ಅಳೆಯುವ ಮೂರು ವಿಧಾನಗಳು ಬಳಕೆಯಲ್ಲಿವೆ. ಅವುಗಳು
                                            ಅನುಕ್ರಮವಾಗಿ ಅಕ್ಷರಗಣ, ಮಾತ್ರಾಗಣ ಮತ್ತು ಅಂಶಗಣಗಳು.
                                            ಇವುಗಳ ಪೈಕಿ ಹೆಚ್ಚು ಗೇಯವೂ, ಹಿಗ್ಗುವ-ಕುಗ್ಗುವ ನಮನಶೀಲತೆಯನ್ನು ಹೊಂದಿರುವುದೂ ಆದ ಅಂಶಗಣವು ಕನ್ನಡಕ್ಕೆ
                                            ಸಹಜವೂ ಆದಿಮವೂ ಆಗಿತ್ತು. ಇಂದಿಗೂ ಜನಪದ ಕಾವ್ಯಗಳಲ್ಲಿ ಅಂಶಗಣ ರಚನೆಗಳು ಹೇರಳವಾಗಿವೆ. ಮಾತ್ರಾಗಣ
                                            ಛಂದಸ್ಸು ಕನ್ನಡಕ್ಕೆ ಬಹಳ ಚೆನ್ನಾಗಿ ಹೊಂದಿಕೊಂಡಿದೆ. ಅಕ್ಷರಗಣವು ಸಂಸ್ಕೃತ ಪದಗಳಿಂದ ನಿಬಿಡವಾದ
                                            ಭಾಷೆಗೆ ಚೆನ್ನಾಗಿ ಹೊಂದಿಕೊಳ್ಳುವುದರಿಂದ ಅವುಗಳನ್ನು ಹಳಗನ್ನಡ ಕಾವ್ಯದಲ್ಲಿ ಹೆಚ್ಚಾಗಿ ನೋಡಬಹುದು.
                                            ಕನ್ನಡದಲ್ಲಿ ಮೂರು, ನಾಲ್ಕು, ಮತ್ತು ಐದು ಮಾತ್ರೆಗಳ ಗಣಗಳನ್ನು ಒಳಗೊಂಡಿರುವ ಘಟಕಗಳನ್ನು ಜಾಸ್ತಿಯಾಗಿ
                                            ಕಾಣಬಹುದು. ಈ ಮೂರು ಗಣಗಳು ಮತ್ತು ಅವುಗಳ ಒಳ ಹೊಂದಾಣಿಕೆಗಳು ಒಂದುಗೂಡಿ ಕನ್ನಡದ ಪ್ರಮುಖ ಲಯವಿನ್ಯಾಸಗಳು
                                            ಮೂಡಿಬಂದಿವೆ. ಇವುಗಳನ್ನು ಉತ್ಸಾಹ, (3.3.3.3....) ಮಂದಾನಿಲ, )4.4.4.4.4....) ಲಲಿತ, (5.5.5.5.5....)
                                            ಮತ್ತು ಭಾಮಿನೀ (3.4.3.4.3.4.3.4.3.4....) ಎಂಬ ಹೆಸರುಗಳಿಂದ ಗುರುತಿಸಲಾಗಿದೆ. 
                                    
                                    
                                        ಒಂದು ಭಾಷೆಯು ಐತಿಹಾಸಿಕವಾಗಿ ಬೆಳೆದುಬಂದ ರೀತಿಗೂ ಆ ಭಾಷೆಯ
                                            ಕವಿಗಳು ಮಾಡಿಕೊಳ್ಳುವ ಛಂದೋರೂಪಗಳ ಆಯ್ಕೆಗಳಿಗೂ ನಿಕಟವಾದ, ಅವಲಂಬನೆಯ ಸಂಬಂಧವಿರುತ್ತದೆ. ಛಂದಸ್ಸಿನ
                                            ಆಯ್ಕೆಗಳು ಭಾಷೆಯ ಚರಿತ್ರೆಯನ್ನು ಅವಲಂಬಿಸಿರುತ್ತವೆ. ಕನ್ನಡ ಲಿಪಿಯ ಉಗಮಕ್ಕಿಂತ ಮೊದಲು, ಅದು ಸಂಸ್ಕೃತದೊಂದಿಗೆ
                                            ನಿಕಟ ಸಂಬಂಧವನ್ನು ಪಡೆಯುವುದಕ್ಕಿಂತ ಮೊದಲು, ಆ ಭಾಷೆಯ ಮೌಖಿಕ ಕಾವ್ಯಗಳು ಅಂಶಗಣಗಳನ್ನೇ ಬಳಸಿರಬಹುದು.
                                            ಆದರೆ, ಬರವಣಿಗೆಯಲ್ಲಿ ಮೈದಳೆದ ಪುಸ್ತಕಗಳ ಹುಟ್ಟಿನ ಜೊತೆಜೊತೆಯಲ್ಲಿಯೇ ಅಕ್ಷರಗಣವನ್ನು ಅವಲಂಬಿಸಿದ
                                            ಕಂದಪದ್ಯ, ಖ್ಯಾತ ಕರ್ನಾಟಕ
                                                ವೃತ್ತಗಳು ಮುಂತಾದ ಛಂದೋರೂಪಗಳ ಬಳಕೆಯು ವಿಪುಲವಾಯಿತು. ತನ್ನ ಕಾಲಕ್ಕಾಗಲೇ ಮರವೆಗೆ
                                            ಸಲ್ಲುತ್ತಿದ್ದ, ಮೂಲದ್ರಾವಿಡ ಛಂದೋರೂಪಗಳನ್ನು ಬಳಸಿದ ಪಂಪನು ಮಾತ್ರವೇ ಈ ಮಾತಿಗೆ ಅಪವಾದ. ಇಂತಹ
                                            ಅಕ್ಷರಗಣ ವೃತ್ತಗಳನ್ನು ಬಳಸುವುದು, ಪ್ರಧಾನ ಪರಂಪರೆಯಾಗಿಯೋ ಅಥವಾ ಕವಿಗಳ ಆಯ್ಕೆಯಾಗಿಯೋ ಹದಿನೆಂಟನೆಯ
                                            ಶತಮಾನದವರೆಗೆ ಬೆಳೆದುಬಂತು.
                                    
                                    
                                        ಹಳಗನ್ನಡವು ನಡುಗನ್ನಡವಾಗಿ ಬದಲಾವಣೆ ಹೊಂದಿದ್ದು, ಮಾತ್ರಾಗಣಗಳ
                                            ಅಪಾರವಾದ ಅಳವಡಿಕೆಗೆ ಎಡೆ ಮಾಡಿಕೊಟ್ಟಿತು. ಅಲ್ಲಿಯವರೆಗೆ ಅಂಶಗಣ ವಿನ್ಯಾಸಗಳನ್ನು ಬಳಸುತ್ತಿದ್ದ
                                            ತ್ರಿಪದಿ, ಷಟ್ಪದಿ ಮುಂತಾದ ರೂಪಗಳೂ ಕ್ರಮೇಣ ಮಾತ್ರಾಗಣ ಬಂಧಗಳಾಗಿ ಬದಲಾಗಿದ್ದು ಬಹಳ ಕುತೂಹಲಕಾರಿಯಾದ
                                            ಬೆಳವಣಿಗೆ. ಷಟ್ಪದಿ, 
                                                ರಗಳೆ ಮತ್ತು ತ್ರಿಪದಿಗಳು ಮಾತ್ರಾಗಣ
                                            ವಿನ್ಯಾಸಗಳನ್ನು ಬಳಸುವ ಮುಖ್ಯವಾದ ಛಂದೋರೂಪಗಳು. ಅವುಗಳಲ್ಲಿ ಪ್ರತಿಯೊಂದರಲ್ಲೂ ಒಳ ವಿಭಜನೆಗಳಿವೆ.
                                            (ಹೆಚ್ಚಿನ ವಿವರಗಳಿಗೆ ಸಂಬಂಧಪಟ್ಟ ನಮೂದುಗಳನ್ನು ಗಮನಿಸಿ.)
                                    
                                    
                                        ಆದರೂ ಅಂಶಗಣಗಳನ್ನು ಕಾಪಾಡಿಕೊಂಡು ಬಂದ 
                                            ಸಾಂಗತ್ಯದಂತಹ ರೂಪಗಳೂ ಇದ್ದವು. ಜನಪದಸಾಹಿತ್ಯವಂತೂ ಅಂಶಗಣಗಳನ್ನು ಎಂದಿಗೂ ಕೈಬಿಡದೆ
                                            ಹಾಡುವ ಗುಣವನ್ನು ಉಳಿಸಿಕೊಂಡಿತು. ವಚನ ಮತ್ತು ಕೀರ್ತನೆಗಳನ್ನು ಇಲ್ಲಿಯೇ ವಿಶೇಷವಾಗಿ ಹೆಸರಿಸಬೇಕು.
                                            ಅವು ಯಾವುದೇ ಛಂದೋರೂಪಕ್ಕೆ ಅಂಟಿಕೊಂಡಿಲ್ಲ. ಅವು ಮುಕ್ತಛಂದದ ಕಡೆಗಿನ ಒಲವನ್ನು ತೋರಿಸುತ್ತವೆ. ಹಾಗೆಂದರೆ,
                                            ಅವು ಲಯರಹಿತವಲ್ಲ. ಪ್ರತಿಯೊಂದು ರಚನೆಗೂ ಅದರದೇ ಆದ ಲಯವಿನ್ಯಾಸವಿರುತ್ತದೆ. ಅವುಗಳಲ್ಲಿ ಹೊಸತನ ಮತ್ತು
                                            ಪ್ರಯೋಗಶೀಲತೆಗೆ ಹೆಚ್ಚಿನ ಅವಕಾಶವಿರುತ್ತದೆ. ಇವೆರಡೂ ಬೇರೆಬೇರೆ ರೀತಿಯಲ್ಲಿ ಸಂಗೀತಕ್ಕೆ ಅಳವಡುತ್ತವೆ.
                                        
                                    
                                    
                                        ಕನ್ನಡದ ಜಾನಪದ ಕಾವ್ಯವು ಸಹಜವಾಗಿಯೇ ಮೌಖಿಕವಾದುದು. ಅದು ದ್ರಾವಿಡತೆ,
                                            ಗೇಯತೆ ಮತ್ತು ಅಂಶಗಣಗಳ ಕಡೆಗೆ ಖಂಡಿತವಾದ ಓಲುವೆಯನ್ನು ತೋರಿಸಿದೆ. ‘ಗಮಕ’ವು ಮಧ್ಯಕಾಲೀನ ಕಾವ್ಯಗಳನ್ನು ಜನತೆಗೆ ತಲುಪಿಸಲು ಬಳಸುವ ವಿಶಿಷ್ಟ
                                                ವಿಧಾನ. ಇದರಲ್ಲಿ, ಲಿಖಿತ ಕೃತಿಯನ್ನು ಅದರ ಛಂದೋಲಯಗಳಿಗೆ ಅನುಗುಣವಾಗಿ, ಬಾಯ್ದರೆಯಾಗಿ ಹೇಳುತ್ತಾರೆ,
                                                ವಾಚನಮಾಡುತ್ತಾರೆ. ಆದರೆ, ’ಗಮಕ’ವು ಸಂಗೀತವನ್ನು ಅವಲಂಬಿಸಿಲ್ಲ.
                                    
                                    
                                        ಬೇರೆ ಭಾಷೆಗಳಂತೆ, ಕನ್ನಡದಲ್ಲಿಯೂ ಛಂದೋನಿಯಮಗಳು ಕೈಕಟ್ಟಿಹಾಕುವ
                                            ಬಂಧನವೇನಲ್ಲ. ೀ ಪ್ರಕಾರಗಳು ತಮಗೆ ಅನುಗುಣವಾದ ನಿಯಮಗಳ ಚೌಕಟ್ಟಿನೊಳಗಡೆಯೇ ಅನೇಕ ಪ್ರಯೋಗಗಳನ್ನು
                                            ನಡೆಸಲು, ಹೊಸತನವನ್ನು ರೂಢಿಸಿಕೊಳ್ಳಲು ಕವಿಗೆ ಅವಕಾಶ ಕೊಡುತ್ತವೆ. ಪಂಪ, ಹರಿಹರ, ರಾಘವಾಂಕ, ಕುಮಾರವ್ಯಾಸ
                                            ಮುಂತಾದ ಮಹಾಕವಿಗಳು ಈ ಅವಕಾಶಗಳನ್ನು ಸೂರೆಮಾಡಿದ್ದಾರೆ. ಕಥೆಯ ಸಂದರ್ಭಕ್ಕೆ ಅನುಗುಣವಾಗಿ ಭಾವಗೀತಾತ್ಮಕವಾದ,
                                            ವರ್ಣನಾತ್ಮಕವಾದ ಅಂತೆಯೇ ನಾಟಕೀಯವಾದ ಭಾಗಗಳನ್ನು ರಚಿಸಲು ಅವರಿಗೆ ಸಾಧ್ಯವಾಗಿದೆ. ಆದ್ದರಿಂದಲೇ ಸತತವಾಗಿ
                                            ಸಾವಿರಾರು ಷಟ್ಪದಿಗಳನ್ನು ಬರೆದಾಗಲೂ ಏಕತಾನತೆಯು ಕಾಣಿಸಿಕೊಂಡಿಲ್ಲ. ಹೊಸಗನ್ನಡ ಕವಿತೆ ಕೂಡ ಪರಿಚಿತವಾದ
                                            ಲಯವಿನ್ಯಾಸಗಳನ್ನು ಹೊಸಬಗೆಯ ಪದ್ಯರೂಪಗಳಲ್ಲಿ ಇಡುವುದರ ಮೂಲಕ ಅಪಾರವಾದ ಪ್ರಗತಿಯನ್ನು ಸಾಧಿಸಿದೆ. 
                                    
                                    
                                        ಕನ್ನಡ ಛಂದಸ್ಸಿನ
                                            ಹೆಚ್ಚು ವಿವರವೂ ವ್ಯವಸ್ಥಿತವೂ ಆದ ಅಧ್ಯಯನಕ್ಕೆ ನೆರವು ನೀಡುವ ಕೆಲವು ಮುಖ್ಯವಾದ ಪುಸ್ತಕಗಳನ್ನು
                                            ಇಲ್ಲಿ ಪಟ್ಟಿ ಮಾಡಲಾಗಿದೆ:
                                    
                                        - ‘ಕನ್ನಡ
                                            ಛಂದಸ್ಸಂಪುಟ’,
                                                ಎಲ್. ಬಸವರಾಜು, 1974, ಗೀತಾ ಬುಕ್ ಹೌಸ್, ಮೈಸೂರು.
                                                
 
                                        - ‘ಕನ್ನಡ
                                            ಕೈಪಿಡಿ’,
                                                ಭಾಗ-1, ಮೈಸೂರು ವಿಶ್ವವಿದ್ಯಾಲಯ, ಮೈಸೂರು.
                                            
 
                                        - ‘ಕಾವ್ಯಾವಲೋಕನ’, ನಾಗವರ್ಮ-1 
 
                                        - ‘ಕನ್ನಡ
                                            ಛಂದೋವಿಕಾಸ’,
                                                ಡಿ.ಎಸ್. ಕರ್ಕಿ, ಧಾರವಾಡ. 
 
                                        - ‘ಕನ್ನಡ
                                            ಛಂದಸ್ಸು’,
                                                ಟಿ.ವಿ.ವೆಂಕಟಾಚಲಶಾಸ್ತ್ರೀ, 1970, ಮೈಸೂರು.
                                            
 
                                        - ‘ಕನ್ನಡ
                                            ಛಂದಸ್ಸಿನ ಚರಿತ್ರೆ’,
                                                (ಎರಡು ಸಂಪುಟಗಳು), ಸಂಪಾದಕರು-ಸಿ.ಪಿ.ಕೃಷ್ಣಕುಮಾರ್, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ,
                                                ಮೈಸೂರು.