ಪಾರಂಪರಿಕ ತಿಳಿವಳಿಕೆಯ ಆಕರಗಳು
ಕನ್ನಡ ಕಾವ್ಯಮೀಮಾಂಸೆ

ಕನ್ನಡ ಸಾಹಿತ್ಯವು ಮೊದಲಿನಿಂದಲೂ ತನ್ನದೇ ಆದ ಕಾವ್ಯಮೀಮಾಂಸೆಯನ್ನು ಮಾಡಿ, ಅದರಲ್ಲಿ ಯಶಸ್ವಿಯಾಗಿದೆ. ಈ ಪ್ರಯತ್ನದಲ್ಲಿ ಅದು ಸಂಸ್ಕೃತ ಮತ್ತು ಇಂಗ್ಲಿಷ್ ಸಾಹಿತ್ಯಗಳ ಸಂದರ್ಭದಲ್ಲಿ ಮೂಡಿಬಂದ ಸಾಹಿತ್ಯಸಿದ್ಧಾಂತಗಳಿಂದ ಪ್ರಬಲವಾದ ಸವಾಲನ್ನು ಎದುರಿಸಬೇಕಾಗಿ ಬಂತು. ಆದರೆ, ಕಾವ್ಯಾವಲೋಕನ, ಉದಯಾದಿತ್ಯಾಲಂಕಾರ ಮುಂತಾದ ಅಲಂಕಾರಶಾಸ್ತ್ರದ ಗ್ರಂಥಗಳನ್ನು ಕನ್ನಡದ್ದೇ ಆದ ಕಾವ್ಯಮೀಮಾಂಸೆಯ ಬಗ್ಗೆ ಸರಿಯಾದ ತಿಳಿವಳಿಕೆಯು ಬರುವುದಿಲ್ಲ. ಯಾಕೆಂದರೆ, ಅವು ಸಂಸ್ಕೃತದಲ್ಲಿರುವ ತಮ್ಮಂತಹುದೇ ಪುಸ್ತಕಗಳ ಪೇಲವ ಅನುಕರಣಗಳು. ಅವು ಸಾಹಿತ್ಯಕ ಸೃಜನಶೀಲತೆಗೆ ಕೊಟ್ಟಿರುವ ಕೊಡುಗೆಯು ಬಹಳ ಕಡಿಮೆ. ಈ ಮಾತಿಗೆ ಕವಿರಾಜಮಾರ್ಗವು ಒಂದೇ ಒಂದು ವಿನಾಯತಿ. ಅದು ಕನ್ನಡ ಸಾಹಿತಿಗಳಿಗೆ ಹೊಸ ಉಪಕರಣಗಳನ್ನು, ತಂತ್ರಗಳನ್ನು ಸೂಚಿಸಲು, ರೂಪಿಸಿಕೊಡಲು ಧೀರವಾಗಿ ಪ್ರಯತ್ನಿಸುತ್ತದೆ. ಅದು ಸಾಹಿತ್ಯಸೃಷ್ಟಿಯ ಸಮಸ್ಯೆಗಳನ್ನು ತನ್ನ ಕಾಲದ ಕನ್ನಡಸಂದರ್ಭದಲ್ಲಿ ಪರಿಶೀಲಿಸುತ್ತದೆ. ಕವಿರಾಜಮಾರ್ಗ, ಸಂಸ್ಕೃತದಿಂದ ಸಾಕಷ್ಟು ಸಂಗತಿಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಯೋಚಿಸುವುದೇ ವಿನಾ ಸಾರಾಸಗಟಾದ ನಿರಾಕರಣೆಯ ಹಾದಿ ಹಿಡಿಯುವುದಿಲ್ಲ. ಆದರೆ, ಈ ನಿಲುವಿನ ಪರಿಣಾಮವಾಗಿ, ಕನ್ನಡ ಸಾಹಿತ್ಯವು ಭಾಷೆ, ಛಂದಸ್ಸು ಮತ್ತು ಕಾವ್ಯಮೀಮಾಂಸೆಗಳ ನೆಲೆಯಲ್ಲಿ ತನಗೆ ಬಹಳ ಸಹಜವಾದ ಅನೇಕ ದ್ರಾವಿಡ ಅಂಶಗಳನ್ನು ಬದಿಗಿರಿಸಬೇಕಾಯಿತು.

ಆದರೆ, ಕನ್ನಡ ಕವಿಗಳು ಯಾವಾಗಲೂ ಹೊಸ ಹಾದಿಗಳನ್ನು ಕಂಡುಕೊಳ್ಳುವ ಉಮೇದು ಮತ್ತು ಶಕ್ತಿಗಳನ್ನು ತೋರಿಸಿದ್ದಾರೆ. ಅವರ ಸಾಹಿತ್ಯತತ್ವ ಮತ್ತು ಸಾಹಿತ್ಯಕ ಹುಡುಕಾಟಗಳು ಅವರು ರಚಿಸಿದ ಕೃತಿಗಳ ಒಳಗಡೆಯೇ ಅಡಗಿಕೊಂಡಿವೆ. ಕೆಲವು ಬಾರಿ ಅವು ನೇರವಾದ ಹೇಳಿಕೆಗಳಾಗಿ ಕಾಣಿಸಿಕೊಂಡರೆ, ಅನೇಕ ಸಲ ಅವು ಅವರು ಮಾಡಿಕೊಳ್ಳುವ ಆಯ್ಕೆಗಳ ಮೂಲಕವಾಗಿಯೇ ಗೊತ್ತಾಗುತ್ತವೆ. ಸಾಹಿತ್ಯತತ್ವಕ್ಕೆ ಸಂಬಂಧಿಸಿದ ಬದಲಾವಣೆಗಳ ಹಿನ್ನೆಲೆಯಲ್ಲಿ, ಒಟ್ಟು ಸಮಾಜದಲ್ಲಿಯೇ ನಡೆಯುತ್ತಿದ್ದ ಹೆಚ್ಚು ಮೂಲಭೂತವಾದ ಬದಲಾವಣೆಗಳು ಇರುತ್ತವೆಂದು ಬಿಡಿಸಿ ಹೇಳುವ ಅಗತ್ಯವಿಲ್ಲ.

ಮೊಲನೆಯದಾಗಿ, ಕನ್ನ ಕವಿಗಳು ಅನುವಾದ-ಭಾಷಾಂತರಗಳನ್ನು ತಮ್ಮ ಸೃಜನಶೀಲತೆಯ ಮುಖ್ಯ ನೆಲೆಯಾಗಿ ಯಾವಾಗಲೂ ಆರಿಸಿಕೊಂಡಿಲ್ಲ. ಹಾಗೆಂದು, ಹೊರಗಿನ ಪ್ರಭಾವಗಳನ್ನು ಶತ್ರುಗಳಂತೆ ಕಂಡು ಸಂಪೂರ್ಣವಾಗಿ ಹೊರಗಿಡುವ ಮುಚ್ಚುದಾರಿಯನ್ನೂ ಅವರು ಆರಿಸಿಕೊಳ್ಳಲಿಲ್ಲ. ಅವರು ಸಂಸ್ಕೃತ ಕಾವ್ಯ ಮತ್ತು ನಾಟಕಗಳಿಂದ ವಸ್ತುವನ್ನು, ಆಶಯಗಳನ್ನು ತೆಗದುಕೊಂಡು, ಅವಕ್ಕೆ ಸಂಪೂರ್ಣವಾಗಿ, ಸ್ಥಳೀಯವೂ ಹೊಸದೂ ಆದ ಶರೀರವನ್ನು ಕೊಡುವ ಪ್ರಯತ್ನ ಮಾಡಿದರು. ಕನ್ನಡದ ಮೊದಲ ಕವಿಗಳಾದ ಪಂಪ, ರನ್ನ. ಜನ್ನ ಮುಂತಾದವರು ಮೂಲ ಕಥೆಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲು ಒಂದಿನಿತೂ ಹಿಂಜರಿಯಲಿಲ್ಲ. ಮಹಾಭಾರತವಾದರೂ ಅಷ್ಟೇ, ಮಹಾಪುರಾಣವಾದರೂ ಅಷ್ಟೇ. ತಾವು ಬರೆದ, ಪೌರಾಣಿಕ ಎನಿಸುವ ಕೃತಿಗಳಲ್ಲಿಯೂ ಸಮಕಾಲೀನವಾದ ಸಂಗತಿಗಳನ್ನು, ಸಮಸ್ಯೆಗಳನ್ನು ಒಳಗೊಳ್ಳುವ ಕೆಲಸದಲ್ಲಿ ಅವರು ಬಹಳ ಯಶಸ್ವಿಯಾದರು. ಪುರಾಣ ಮತ್ತು ಇತಿಹಾಸಗಳ ನಡುವೆ ಒಂದು ಸಂಧಿಭೂಮಿಯನ್ನು ರೂಪಿಸಿದ ಈ ಕವಿಗಳು, ಅವೆರಡನ್ನೂ ತಮ್ಮ ಕಾಲದ ಅಗತ್ಯಗಳಿಗೆ ಅಡಿಯಾಳಾಗಿಸಿದರು. ಪಂಪಭಾರತ, ಗದಾಯುದ್ಧ, ಯಶೋಧರಚರಿತೆಮುಂತಾದ ಕೃತಿಗಳು ಈ ಕೆಲಸವನ್ನು ಮನಮುಟ್ಟುವಂತೆ ಮಾಡಿವೆ.

ಎರಡನೆಯದಾಗಿ ಕನ್ನಡ ಸಾಹಿತ್ಯವು ತನ್ನ ಅತ್ಯುತ್ತಮ ನೆಲೆಗಳಲ್ಲಿ ಧರ್ಮದ ಸಂಗಡ ಬಹಳ ಸೃಜನಶೀಲವಾದ ಒಡನಾಟವನ್ನು ನಡೆಸಿದೆ. ಮಹತ್ವದ ಬರವಣಿಗೆಯು, ತಮ್ಮನ್ನು ಧರ್ಮಪ್ರಚಾರದ ಉಪಕರಣಗಳಾಗಿ ಬಳಸಿಕೊಳ್ಳದಂತೆ ಮಾಡಬೇಕು ಎನ್ನುವ ಎಚ್ಚರದಲ್ಲಿಯೇ ಮೈದಳೆದಿವೆ. ಅವು ನಿರ್ದಿಷ್ಟ ಧರ್ಮಗಳ ಗಡಿಗೆರೆಗಳನ್ನು ಮೀರಿ ತಮ್ಮದೇ ಆದ ದಾರ್ಶನಿಕ ನೆಲೆಗಳನ್ನು ಕಟ್ಟಿಕೊಂಡಿವೆ. ಒಟ್ಟು ಬದುಕಿನ ಬಗ್ಗೆ ನಮಗಿರುವ ತಿಳಿವಳಿಕೆಯನ್ನು ಹೆಚ್ಚಿಸುವ ಕೆಲಸದಲ್ಲಿ ಅವು ಅಂದಿನಿಂದ ಇಂದಿನವರೆಗೆ ಗೆಲುವು ಪಡೆದಿವೆ. ಈ ಮಾತು ಕಲಾಕೃತಿಗಳನ್ನು, ಸಾಹಿತ್ಯವನ್ನು ರಚಿಸಬೇಕು ಎಂಬ ಉದ್ದೇಶದಿಂದ ಹೊರಡದ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಮುಂತಾದ ಹಿರಿಯ ವೀರಶೈವ ಸಂತಕವಿಗಳ ವಿಷಯದಲ್ಲಿಯೂ ನಿಜ, ಇನ್ನಷ್ಟು ನಿಜ. ಏಕೆಂದರೆ, ಅವರಿಗೆ ಸಾಹಿತ್ಯರಚನೆ ಮತ್ತು ಸಂವಹನಗಳನ್ನು ಕುರಿತಂತೆ ತಮ್ಮದೇ ಆದ ನಿಲುವುಗಳು, ಸಿದ್ಧಾಂತಗಳು ಇದ್ದವು.

ಕಾಲಕ್ರಮದಲ್ಲಿ ಇಡೀ ಭಾರತದೇಶದ ತುಂಬಾ ಹರಡಿಕೊಂಡ ಭಕ್ತಿಚಳುವಳಿಯ ಬೇರುಗಳು ದಕ್ಷಿಣಭಾರತದಲ್ಲಿ, ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ತಮಿಳುನಾಡು ಮತ್ತು ಕರ್ನಾಟಕಗಳಲ್ಲಿ ಇದ್ದವು. ಶಿವಭಕ್ತರಾದ ವಚನಕಾರರು ಮತ್ತು ವಿಷ್ಣುಭಕ್ತರಾದ ಹರಿದಾಸರು ಜನಸಾಮಾನ್ಯರನ್ನು ತಲುಪುವ ಗುರಿಯನ್ನು ಹೊಂದಿದ್ದರು. ಅವರು ರಾಜಾಸ್ಥಾನಗಳ ಕಟ್ಟುಪಾಡುಗಳ ನಡುವೆ ಸೆರೆಯಾಗಿರಲು ಇಷ್ಟಪಡಲಿಲ್ಲ. ಈ ಹಂಬಲ ಮತ್ತು ಹಳಗನ್ನಡವು ನಡುಗನ್ನಡವಾಗಿ ಬದಲಾವಣೆಯಾಗಿದ್ದು ಹೊಸ ಕಾವ್ಯಮೀಮಾಂಸೆಗೆ ಎಡೆ ಮಾಡಿತು. ಅದು ಒಣ ಪಾಂಡಿತ್ಯ ಮತ್ತು ಬಿಗಿಯಾದ ಮಾತುಗಾರಿಕೆಯನ್ನು ಬದಿಗಿಟ್ಟವು. ಕವಿತೆಯ ಭಾಷೆಗೆ ಜನಗಳ ಭಾಷೆಯ ಮಂತ್ರಸ್ಪರ್ಶವಾಯಿತು. ಅಲ್ಲದೆ, ಸಾಹಿತ್ಯ ಮತ್ತು ಸಂಗೀತಗಳನ್ನು ಒಟ್ಟಿಗೆ ತರುವ ಮೂಲಕ, ಸಂವಹನದ ಹೊಸ ಬಗೆಗಳನ್ನು ಕಂಡುಕೊಳ್ಳುವುದು ಅವರಿಗೆ ಸಾಧ್ಯವಾಯಿತು. ಗಮಕವಿಧಾನವು ಜನತೆಯನ್ನು ತಲುಪಲು ಬಹಳ ನೆರವು ನೀಡಿತು. ಕಾವ್ಯಭಾಷೆ ಮತ್ತು ಛಂದಸ್ಸುಗಳಲ್ಲಿ ಒಂದನ್ನೊಂದು ಅವಲಂಬಿಸಿದ ಹೊಸ ಹಾದಿಗಳನ್ನು ಕಂಡುಕೊಳ್ಳಲಾಯಿತು. ರಾಜ್ಯ-ಸಾಮ್ರಾಜ್ಯಗಳನ್ನು ಹುರುಪಿನ ಜೊತೆಜೊತೆಯಲ್ಲಿಯೇ ನಿರಂತರವಾದ ಯುದ್ಧಗಳ ಪರಿಣಾಮವಾಗಿ ಹರಡಡಿಕೊಂಡ ಹಿಂಸೆಯ ತಲ್ಲಣಗಳೂ ಇದ್ದವು. ಇದರ ಪರಿಣಾಮವಾಗಿ ಸಾಹಿತ್ಯಕೃತಿಗಳು ಕವಿಗಳ ಆಯ್ಕೆ ಮತ್ತು ಅವಲಂಬನೆಗಳಿಗೆ ಅನುಗುಣವಾಗಿ, ಯುದ್ಧವನ್ನು ಮೆರೆಸುವ ಹಾಗೂ ಟೀಕಿಸುವ ಕೆಲಸಗಳನ್ನು ಮಾಡಿದವು. ಆದರೆ, ನಿಜವಾಗಿಯೂ ಮಹಾಕವಿಗಳಾದವರು, ತಮ್ಮ ಆಶ್ರಯದಾತರಾದ ರಾಜರುಗಳಿಗೆ ಬೆಂಬಲ ನೀಡುವ ಮಾತುಗಳ ನಡುವೆಯೇ ಯುದ್ಧದ ಫಲವಾದ ವಿಷಾದವನ್ನು ಹೊರಗೆಡಹುವ ಕೆಲಸವನ್ನೂ ಮಾಡಿದ್ದಾರೆ.

. ಆದರೆ, ಇವೆಲ್ಲದರ ನಡುವೆಯೂ ಅನೇಕ ಮಧ್ಯಮದರ್ಜೆಯ ಕವಿಗಳು ಕದನಕುತೂಹಲಿಯಾದ ಧಾರ್ಮಿಕ ಪ್ರಚಾರಗಳಲ್ಲಿ ತೊಡಗಿಕೊಂಡರೆನ್ನುವುದನ್ನು ಅಲ್ಲಗಳೆಯಲು ಸಾದ್ಯವಿಲ್ಲ. ಅವರ ಮೂಲಭೂತವಾದೀ ನಿಲುವುಗಳ ಫಲವಾಗಿ, ಅವರ ಕಾವ್ಯಗಳು ಮೇಲುನೋಟಕ್ಕೆ ಧಾರ್ಮಿಕವಾಗಿ ಕಂಡರೂ ನಿಜವಾಗಿ ನೋಡಿದರೆ, ಅಂತರಂಗದಲ್ಲಿ ಅಸಹಿಷ್ಣುತೆಯಿಂದ ತುಂಬಿದ್ದವು. ವಸಾಹತುಶಾಹಿಯ ಆಗಮನಕ್ಕಿಂತ ಕೊಂಚ ಮುಂಚಿತವಾಗಿ ಬಂದ ಮಧ್ಯಕಾಲೀನ ಕಾವ್ಯಗಳ ಮಟ್ಟಿಗಂತೂ ಈ ಮಾತು ಇನ್ನಷ್ಟು ನಿಜ. ಆದರೆ, ಅದೇ ಕಾಲದಲ್ಲಿ ಅಸಹಾಯಕತೆ ಮತ್ತು ಅಗತ್ಯಗಳು ಭಕ್ತಿ ಮತ್ತು ಅನುಭಾವಗಳ ಕೂಡುವಿಕೆಯಿಂದ ಮೂಡಿಬಂದ ತತ್ವದ ಪದಗಳಲ್ಲಿ ಹಾಗೂ ಆ ಕಾಲದ ಜನಪದ ಕಾವ್ಯಗಳಲ್ಲಿ ಕಾಣಿಸಿಕೊಂಡವು. ಅವು ಏಕಕಾಲದಲ್ಲಿ ಆಸ್ತಿಕವೂ ಜಾತ್ಯತೀತವೂ ಆಗಿದ್ದವು. ಇಂತಹ ಸಾಹಿತ್ಯವು ಅನಕ್ಷರಸ್ಥರಾದ ಜನಸಾಮಾನ್ಯರ ನಡುವಿನಿಂದ ಬಂದಿತೆಂಬ ಸಂಗತಿಯು ಆಕಸ್ಮಿಕವೇನೂ ಅಲ್ಲ.

ಅದೇನೇ ಇರಲಿ, ಅಲಂಕಾರಶಾಸ್ತ್ರ, ಛಂದಸ್ಸು, ವ್ಯಾಕರಣ ಮುಂತಾದ ವಿಷಯಗಳನ್ನು ಕುರಿತ ಕನ್ನಡ ಕೃತಿಗಳು, ಕವಿತಾರಚನೆಯ ಕಲೆಗೆ ಅಗತ್ಯವಾದ ಶಿಸ್ತುಗಳನ್ನು, ತಂತ್ರಗಳನ್ನು ಹೇಳಿಕೊಡುವುದರಲ್ಲಿ ಮಾತ್ರ ಆಸಕ್ತವಾಗಿದ್ದವು. ತನ್ನ ಅಗತ್ಯಕ್ಕೆ ತಕ್ಕಂತೆ ಹೊಸ ಉಪಕರಣಗಳನ್ನು, ಮಾರ್ಗೋಪಾಯಗಳನ್ನು ಕಟ್ಟಿಕೊಳ್ಳಬಲ್ಲ ಪ್ರತಿಭೆಯ ಕಡೆಗೆ ಅವು ವಿಶೇಷ ಗಮನ ಹರಿಸಲಿಲ್ಲ. ಈ ಪಠ್ಯಗಳು ಸಾಮಾನ್ಯವಾಗಿ ನಿಯಮಗಳನ್ನು ಹೇಳಲು, ಹೇರಲು ತೊಡಗುತ್ತವೆ. ಪ್ರಯೋಗಶೀಲತೆಯನ್ನು ಉತ್ತೇಜಿಸುವುದಿಲ್ಲ. ಸಂಸ್ಕೃತಕೃತಿಗಳ ಮೇಲಿನ ಅನಗತ್ಯವಾದ, ಅತಿಯಾದ ಕುರುಡು ಅವಲಂಬನೆಯ ಫಲವಾಗಿ ಕನ್ನಡ ಸಾಹಿತ್ಯದ ಬೆಳವಣಿಗೆಯ ಜೊತೆಜೊತೆಗೆ ಹೆಜ್ಜೆಹಾಕಲು ಅವುಗಳಿಗೆ ಸಾಧ್ಯವಾಗಲಿಲ್ಲ. ಈ ವಿಷಯಗಳನ್ನು ಕುರಿತ ಪ್ರಾಚೀನ ಕೃತಿಗಳ ಪಟ್ಟಿಯೊಂದನ್ನು ಇಲ್ಲಿ ಕೊಡಲಾಗಿದೆ.

 

ಛಂದಶ್ಶಾಸ್ತ್ರ:

 1. ಕವಿರಾಜಮಾರ್ಗ ಶ್ರೀವಿಜಯ
 2. ಛಂದೋಂಬುಧಿ ನಾಗವರ್ಮ-2
 3. ಕವಿಜಿಹ್ವಾಬಂಧನ ಈಶ್ವರಕವಿ
 4. ಛಂದಸ್ಸಾರ ಗುಣವರ್ಮ
 5. ನಂದಿ ಛಂದೋರ್ಣವ ವೀರಭದ್ರ

 ಕಾವ್ಯಮೀಮಾಂಸೆ:

 1. ಕವಿರಾಜಮಾರ್ಗ ಶ್ರೀವಿಜಯ
 2. ಕಾವ್ಯಾವಲೋಕನ ನಾಗವರ್ಮ-2
 3. ಉದಯಾದಿತ್ಯಾಲಂಕಾರ ಉದಯಾದಿತ್ಯ
 4. ಶೃಂಗಾರ ರತ್ನಾಕರ ಕಾಮದೇವ
 5. ಮಾಧವಾಲಂಕಾರ ಮಾಧವ
 6. ರಸರತ್ನಾಕರ ಸಾಳ್ವ
 7. ಅಪ್ರತಿಮವೀರಚರಿತೆ ತಿರುಮಲಾರ್ಯ
 8. ನರಪತಿಚರಿತಂ ಲಿಂಗರಾಜ

ಆಧುನಿಕ ಕಾಲದ ಸಾಹಿತ್ಯತತ್ವಕಾರರು ಮತ್ತು ವಿಮರ್ಶಕರು ಹಳಗನ್ನಡ ಮತ್ತು ನಡುಗನ್ನಡ ಕಾವ್ಯಗಳನ್ನು ಆಳವಾಗಿ ಅಧ್ಯಯನ ಮಾಡಿ, ಅವುಗಳಲ್ಲಿ ಅಡಗಿರುವ ಕಾವ್ಯತತ್ವಗಳನ್ನು ವಿವರಿಸುವ ಗಂಭೀರ ಪ್ರಯತ್ನಗಳನ್ನು ಮಾಡಿದ್ದಾರೆ. ಅವರ ಪೈಕಿ ಮುಳಿಯ ತಿಮ್ಮಪ್ಪಯ್ಯ, ಜಿ.ಎಸ್. ಶಿವರುದ್ರಪ್ಪ, ಕೀರ್ತಿನಾಥ ಕುರ್ತಕೋಟಿ, ಕೆ.ವಿ.ಸುಬ್ಬಣ್ಣ, ಕೆ.ವಿ.ನಾರಾಯಣ, ಡಿ.ಆರ್. ನಾಗರಾಜ್, ಶೆಲ್ಡನ್ ಪೊಲಾಕ್, ಚಂದ್ರಶೇಖರ ನಂಗಲಿ, ಎಸ್.ಎಂ. ಹಿರೇಮಠ, ವೀರಣ್ಣ ದಂಡೆ ಮುಂತಾದವರ ಪ್ರಯತ್ನಗಳು ಗಮನೀಯವಾದವು.

 

 

ಮುಂದಿನ ಓದು ಮತ್ತು ಲಿಂಕುಗಳು:

 1. ಕನ್ನಡ ಕವಿಗಳ ಕಾವ್ಯಕಲ್ಪನೆ ಜಿ.ಎಸ್. ಶಿವರುದ್ರಪ್ಪ, 1985, ಬೆಂಗಳೂರು
 2. ಭಾರತೀಯ ಕಾವ್ಯಮೀಮಾಂಸೆ ತೀ.ನಂ.ಶ್ರೀಕಂಠಯ್ಯ, 1956, ಮೈಸೂರು
 3. ಬೇರು, ಕಾಂಡ, ಚಿಗುರು ಕೆ.ವಿ. ನಾರಾಯಣ, 1997, ಬೆಂಗಳೂರು
 4. ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು ಕೆ.ವಿ.ಸುಬ್ಬಣ್ಣ, 2000, ಹೆಗ್ಗೋಡು
 5. ಅಲ್ಲಮಪ್ರಭು ಮತ್ತು ಶೈವಪ್ರತಿಭೆ ಡಿ.ಆರ್. ನಾಗರಾಜ್, 1999, ಹೆಗ್ಗೋಡು
 6. ವಿಶ್ವಾತ್ಮಕ ದೇಶಭಾಷೆ, (The Cosmopolitan Vernacular) ಶೆಲ್ಡನ್ ಪೊಲಾಕ್, ಅನುವಾದ: ಕೆ.ವಿ.ಅಕ್ಷರ, 2003, ಹೆಗ್ಗೋಡು
 7. ಕನ್ನಡ ಕಾವ್ಯಮೀಮಾಂಸೆ ಎಸ್.ಎಂ. ಹಿರೇಮಠ, ಗುಲ್ಬರ್ಗ
 8. ವಚನಕಾರರ ಕಾವ್ಯಮೀಮಾಂಸೆ ಎಸ್.ಎಂ.ಹಿರೇಮಠ, ಗುಲ್ಬರ್ಗ
 9. ಭಾರತೀಯ ಕಾವ್ಯಮೀಮಾಂಸೆಗೆ ಕನ್ನಡ ಕವಿಗಳ ಕೊಡುಗೆ, ಎಂ.ವಿ.ಸೀತಾರಾಮಯ್ಯ, 1970, ಮೈಸೂರು ವಿಶ್ವವಿದ್ಯಾಲಯ, ಮೈಸೂರು

ಮುಖಪುಟ / ಪಾರಂಪರಿಕ ತಿಳಿವಳಿಕೆಯ ಆಕರಗಳು