ಪಾರಂಪರಿಕ ತಿಳಿವಳಿಕೆಯ ಆಕರಗಳು
ಜನವಶ್ಯ
  1. ಪುಸ್ತಕದ ಹೆಸರು: ಜನವಶ್ಯ (ಈ ಕೃತಿಯನ್ನು ಮಲ್ಲಿಕಾರ್ಜುನವಿಜಯ ಎಂದೂ ಕರೆಯಲಾಗಿದೆ)
  2. ಲೇಖಕನ ಹೆಸರು: ಕಲ್ಲರಸ
  3. ಕಾಲ-ಸ್ಥಳ-ರಾಜಾಶ್ರಯ: ಕ್ರಿ.ಶ. 1450,(ಹದಿನೈದನೆಯ ಶತಮಾನ), ಹಂಪಿ, ಕ್ರಿಯಾಕ್ತಿಪಂಡಿತನ ಶಿಷ್ಯ
  4. ವಸ್ತು: ಕಾಮಶಾಸ್ತ್ರ
  5. ಪರಿಚಯ: ಜನವಶ್ಯವು, ಪ್ರಾಚೀನ ಕನ್ನಡದಲ್ಲಿ ಬಂದಿರುವ ಕಾಮಶಾಸ್ತ್ರವನ್ನು ಕುರಿತ ಬಹಳ ವಿಸ್ತೃತವಾದ ಗ್ರಂಥ. ಕವಿಯು ಆ ವಿಷಯವನ್ನು ಎಲ್ಲಿಯೂ ಸ್ಪಷ್ಟಪಡಿಸದಿದ್ದರೂ ಇದು, ಕಕ್ಕೋಕನು ಸಂಸ್ಕೃತದಲ್ಲಿ ಬರೆದಿರುವ ರತಿರಹಸ್ಯದ ನೇರವಾದ ಅನುವಾದ. ಈ ಪುಸ್ತಕದಲ್ಲಿ ಹದಿಮೂರು ಅಧ್ಯಾಯಗಳಲ್ಲಿ ಹರಡಿಕೊಂಡಿರುವ 685 ಪದ್ಯಗಳಿವೆ. ಈ ಪದ್ಯಗಳನ್ನು ಶರ, ಕುಸುಮ ಮತ್ತು ಭೋಗ ಷಟ್ಪದಿಗಳಲ್ಲಿ ರಚಿಸಲಾಗಿದೆ. ಜನವಶ್ಯವನ್ನು ಪತಿ ಪತ್ನಿಯರ ನಡುವಿನ ಸಂಭಾಷಣೆಯಂತೆ ಕಟ್ಟಿಕೊಡಲಾಗಿದೆ. ಕಲ್ಲರಸನು ಈ ಸಂಭಾಷಣೆಯು ತನ್ನ ಆಶ್ರಯದಾತನಾಗಿದ್ದ ದೊರೆ ಮಲ್ಲಿಕಾರ್ಜುನನಿಗೂ ಅವನ ಪತ್ನಿಗೂ ನಡೆದ ಸಂಭಾಷಣೆಯೆಂದು ಹೇಳುತ್ತಾನೆ. ಮಲ್ಲಿಕಾರ್ಜುನನು 1446-65 ರ ಅವಧಿಯಲ್ಲಿ ರಾಜ್ಯಭಾರ ಮಾಡಿದ ವಿಜಯನಗರ ರಾಜವಂಶದ ಅರಸ. ಸಂಸ್ಕೃತ ಪಠ್ಯಗಳು ಹಾಕಿಕೊಟ್ಟ ಪರಂಪರೆಗೆ ಅನುಗುಣವಾಗಿ, ಈ ಕೃತಿಯಲ್ಲಿ ಕಾಮಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಸೂಕ್ಷ್ಮ ಸಂಗತಿಗಳನ್ನು ಹೇಳಲಾಗಿದೆ.

ಪದ್ಮಿನಿ, ಹಸ್ತಿನಿ, ಚಿತ್ತಿನಿ ಮುಂತಾದ ವಿಭಿನ್ನ ಗುಣಲಕ್ಷಣಗಳ ಸ್ತ್ರೀಯರ ವರ್ಣನೆ, ಸಂಭೋಗಪೂರ್ವ ಚಟುವಟಿಕೆಗಳ ವಿವರಗಳು, ಸಂಭೋಗದ ವಿವಿಧ ಭಂಗಿಗಳು, ಲೈಂಗಿಕ ಆರೋಗ್ಯದ ಪರಿಪಾಲನೆ ಮತ್ತು ವೃದ್ಧಿಗಾಗಿ ಬಳಸಬಹುದಾದ ಔಷಧಗಳ ವಿವರಗಳು, ಸಮಾಜದಲ್ಲಿ ವೇಶ್ಯೆಯರು ವಹಿಸುವ ಪಾತ್ರ ಮುಂತಾದವು ಈ ಪುಸ್ತಕದಲ್ಲಿ ನಿರೂಪಿತವಾಗಿರುವ ವಸ್ತುಗಳು. ಪ್ರಾಯಶಃ, ಭಾರತೀಯ ಮತ್ತು ಓರಿಯೆಂಟಲ್ ಹಿನ್ನೆಲೆಯ ಕಾಮಶಾಸ್ತ್ರದ ಕೃತಿಗಳು ಮನುಷ್ಯಸ್ವಭಾವದ ಆಳವಾದ ತಿಳಿವಳಿಕೆಯಿಂದ ಮೂಡಿರುವ ಮನಶ್ಶಾಸ್ತ್ರೀಯ ವಿಧಾನವನ್ನು ಬಳಸುತ್ತವೆ,. ಇವಕ್ಕೆ ಹೋಲಿಸಿದರೆ, ಪಾಶ್ಚಾತ್ಯ ಕೃತಿಗಳು ಕೊಂಚ ರೂಕ್ಷವೆಂದೇ ಹೇಳಬೇಕು.

  1. ಪ್ರಕಟಣೆಯ ಇತಿಹಾಸ:

ಅ. ಜನವಶ್ಯ, ಸಂ. ಜಿ.ಜಿ. ಮಂಜುನಾಥನ್, 1974, ಕನ್ನಡ ಅಧ್ಯಯನಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.

  1. ಮುಂದಿನ ಓದು ಮತ್ತು ಲಿಂಕುಗಳು:
  2. ಅನುವಾದ:
  3. ಈ ಕೃತಿಯನ್ನು ಸಿದ್ಧಪಡಿಸುವಾಗ ಶ್ರೀ ಮಂಜುನಾಥನ್ ಅವರು ಏಳು ಹಸ್ತಪ್ರತಿಗಳನ್ನು ಬಳಸಿಕೊಂಡಿದ್ದಾರೆ. ಈ ಪುಸ್ತಕದ ಅನುಬಂಧವಾಗಿ, ಕಕ್ಕೋಕನ ರತಿರಹಸ್ಯವೆಂಬ ಕೃತಿಯನ್ನೂ ಕೊಡಲಾಗಿದೆ.

ಮುಖಪುಟ / ಪಾರಂಪರಿಕ ತಿಳಿವಳಿಕೆಯ ಆಕರಗಳು