ಪಾರಂಪರಿಕ ತಿಳಿವಳಿಕೆಯ ಆಕರಗಳು
ಛಂದೋಂಬುಧಿ

 

  1. ಪುಸ್ತಕದ ಹೆಸರು: ಛಂದೋಂಬುಧಿ
  2. ಲೇಖಕನ ಹೆಸರು: ನಾಗವರ್ಮ-1, (ಛಂದೋಂಬುಧಿಯನ್ನು ಬರೆದ ಮೂರನೆಯ ನಾಗವರ್ಮನು ಇದ್ದನೆನ್ನುವುದು ಎಲ್. ಬಸವರಾಜು ಅವರ ಅಭಿಪ್ರಾಯ)
  3. ಕಾಲ: ಹತ್ತನೆಯ ಶತಮಾನ
  4. ವಸ್ತು: ಛಂದಸ್ಸು
  5. ಪರಿಚಯ: ಕನ್ನಡ ಛಂದಸ್ಸನ್ನು ಕುರಿತ ಪ್ರಾಚೀನ ಕೃತಿಗಳಲ್ಲಿ ನಾಗವರ್ಮನ ಛಂದೋಂಬುಧಿಯೇ ಮೊದಲನೆಯದು ಮತ್ತು ಮುಖ್ಯವಾದುದು. ತನ್ನ ಕಾಲದಲ್ಲಿ, ಕನ್ನಡ ಮತ್ತು ಸಂಸ್ಕೃತಗಳ ನಡುವೆ ನಡೆಯುತ್ತಿದ್ದ ಸಂಘರ್ಷ-ಸಹಯೋಗಗಳನ್ನು, ಛಂದಸ್ಸಿಗೆ ಅನ್ವಯವಾಗುವಂತೆ ನಿರೂಪಿಸಿರುವುದು ಈ ಕೃತಿಯ ಹೆಚ್ಚುಗಾರಿಕೆ. ಈ ಕೆಲಸವನ್ನು, ಸಂಸ್ಕೃತ ಪಕ್ಷಪಾತಿಯಾಗದೆ, ವಸ್ತುನಿಷ್ಠವಾಗಿ ನಿರ್ವಹಿಸುವುದು ನಾಗವರ್ಮನಿಗೆ ಸಾಧ್ಯವಾಗಿದೆ. ಕನ್ನಡಕ್ಕೆ ಸಹಜವಾದ ದ್ರಾವಿಡ ಮೂಲಗಳಿಂದ ಒಡಮೂಡಿದ, ಛಂದೋರೂಪಗಳನ್ನು, ನಾಗವರ್ಮನು ವಿವರವಾಗಿ ತಿಳಿಸಿದ್ದಾನೆ. ಆ ರೂಪಗಳು ಮಾಧುರ್ಯವೇ ಆಧಾರವಾದ ಅಂಶಗಣಗಳನ್ನು ಆಧರಿಸಿವೆ. ಆದ್ದರಿಂದಲೇ, ಅವು ಮೌಖಿಕ ಪರಂಪರೆಗೆ ಬಹಳ ಚೆನ್ನಾಗಿ ಹೊಂದಿಕೊಳ್ಳುತ್ತವೆ. ಏಳೆ, ಪಿರಿಯಕ್ಕರ, ಮದನವತಿ, ತ್ರಿಪದಿ, ಮೂಲ ಷಟ್ಪದಿ ಮುಂತಾದ ರೂಪಗಳನ್ನು ಬಹಳ ವಿವರವಾಗಿ, ಕೆಲವು ಕಡೆ, ಸೂಕ್ತ ಉದಾಹರಣೆಗಳೊಂದಿಗೆ ಕೊಡಲಾಗಿದೆ.

ಆದರೂ ತನ್ನ ಕಾಲದಲ್ಲಿ ನಡೆಯುತ್ತಿದ್ದ ಬದಲಾವಣೆಗಳನ್ನು ನಾಗವರ್ಮನು ಸೂಕ್ಷ್ಮವಾಗಿ ಗಮನಿಸಿದ್ದನು. ಅಂಶಗಣಘಟಿತವಾದ ಛಂದೋರೂಪಗಳು, ಮಾತ್ರಾಗಣವಾಗಿ ಬದಲಾಗುತ್ತಿದ್ದ ಪ್ರಕ್ರಿಯೆಯನ್ನು ಅವನು ವಿವರಿಸುತ್ತಾನೆ. ಹಾಗೆಯೇ ಚಂಪೂ ಕಾವ್ಯಗಳಲ್ಲಿ ಪ್ರಚಲಿತವಾಗಿದ್ದ ಸಂಸ್ಕೃತ ಛಂದೋಬಂಧಗಳೂ ಅವನಿಗೆ ಅಪರಿಚಿತವಾಗಿರಲಿಲ್ಲ. ಅವುಗಳನ್ನೂ ಅವನು ವರ್ಣಿಸುತ್ತಾನೆ. ಅದರಲ್ಲಿಯೂ, ಕನ್ನಡ ಕಾವ್ಯಗಳಲ್ಲಿ ವಿಪುಲವಾಗಿ ಬಳಕೆಯಲ್ಲಿರುವ ಖ್ಯಾತಕರ್ನಾಟಕ ವೃತ್ತಗಳನ್ನು ಗುರುತಿಸಿ ವಿವರಿಸಿದ್ದು ಅವನ ಸಾಧನೆ.

ಛಂದೋಂಬುಧಿಯಲ್ಲಿ ಆರು ಅಧಿಕರಣಗಳಿವೆ. ಅದು ಲೇಖಕನು ತನ್ನ ಪತ್ನಿಗೆ ಹೇಳಿದಂತೆ ರಚಿತವಾಗಿದೆ. ಇದರಿಂದ ನಿರೂಪಣೆಗೆ ಒಂದು ಹೊಸ ಹುರುಪು ಬಂದಿದೆ. ಮೊದಲ ಭಾಗದಲ್ಲಿ ಛಂದಸ್ಸಿಗೆ ಸಂಬಂಧಿಸಿದ ಪ್ರಾಥಮಿಕ ಮಾಹಿತಿಯನ್ನು ಕೊಟ್ಟ ನಂತರ, ಕನ್ನಡದ ಎಲ್ಲ ಛಂದೋರೂಪಗಳ ಮೂಲವಾದ ಅಕ್ಷರ ಛಂದಸ್ಸು, ಮಾತ್ರಾಛಂದಸ್ಸು ಮತ್ತು ಅಂಶಛಂದಸ್ಸುಗಳ ವಿವರಣೆಗಳಿವೆ. ಕರ್ನಾಟಕ ವಿಷಯಜಾತಿ ಎಂದರೆ, ಅಂಶಗಣಘಟಿತವೂ ಕನ್ನಡಕ್ಕೆ ಸಹಜವೂ ಆದ ಛಂದೋಬಂಧಗಳನ್ನು ವಿವರಿಸುವ ಐದನೆಯ ಅಧಿಕರಣವೇ ಈ ಕೃತಿಯ ಹೃದಯ.

ಹೀಗೆ ಛಂದೋಂಬುಧಿಯು ಪ್ರಾಚೀನ ಕನ್ನಡದ ಅಧ್ಯಯನಕ್ಕೆ ಬೇಕಾದ ತಳಹದಿಯನ್ನು ಹಾಕಿಕೊಡುವ ಆದ್ಯ ಕೃತಿಗಳಲ್ಲಿ ಒಂದು.

 

  1. ಪ್ರಕಟಣೆಯ ಇತಿಹಾಸ:

ಅ. ಛಂದೋಂಬುಧಿ, ಸಂ. ಬಸವಲಿಂಗಯ್ಯ ಮಡಿವಾಳಯ್ಯ ಕುಂದಗೋಳ, ಸವಣೂರು, 1862 (ಇದೇ ಆವೃತ್ತಿಯ ಕಲ್ಲಚ್ಚಿನ ಮುದ್ರಣವು, ಧಾರವಾಡದಲ್ಲಿ ಪ್ರಕಟವಾಯಿತು.

ಆ. ಛಂದೋಂಬುಧಿ, ಸಂ. ಫರ್ಡಿನಂಡ್ ಕಿಟ್ಟಲ್, 1874

ಇ. ಛಂದೋಂಬುಧಿ, ಸಂ. ಎಂ.ಎ. ರಾಮಾನುಜ ಅಯ್ಯಂಗಾರ್ ಮತ್ತು ಎಸ್.ಜಿ.ನರಸಿಂಹಾಚಾರ್, ಕರ್ನಾಟಕ ಕಾವ್ಯಕಲಾನಿಧಿಮಾಲೆ, 1919(?)

ಈ. ಕನ್ನಡ ಛಂದಸ್ಸಂಪುಟ, ಎಲ್. ಬಸವರಾಜು, 1974, ಗೀತಾ ಬುಕ್ ಹೌಸ್, ಮೈಸೂರು.

 

7. ಮುಂದಿನ ಓದು ಮತ್ತು ಲಿಂಕುಗಳು:

ಅ. ಕನ್ನಡ ಛಂದಸ್ಸಿನ ಚರಿತ್ರೆ, ಸಂ. ಸಿ.ಪಿ. ಕೃಷ್ಣಕುಮಾರ್, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.

ಆ. ಕನ್ನಡ ಛಂದಸ್ಸು, ಟಿ.ವಿ.ವೆಂಕಟಾಚಲಶಾಸ್ತ್ರೀ, ಮೈಸೂರು.

ಇ. ಛಂದೋಂಬುಧಿಯನ್ನು ಸಂಪಾದಿಸಿರುವ ಮಹನೀಯರು ತಮ್ಮ ಆವೃತ್ತಿಗಳಿಗೆ ಬರೆದಿರುವ ಪ್ರಸ್ತಾವನೆಗಳು.

ಮುಖಪುಟ / ಪಾರಂಪರಿಕ ತಿಳಿವಳಿಕೆಯ ಆಕರಗಳು